ಮಂಡ್ಯ,ಏ.20- ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಹಾಗೂ ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್ ನಿನ್ನೆ ಮಂಡ್ಯ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಬಸ್ ಸ್ಟ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ತೆರಳಿದ ರವೀಂದ್ರ ಶೀಕಂಠಯ್ಯ ಅವರೊಂದಿಗೆ ಅವರ ತಾಯಿ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ, ಪತ್ನಿ ಗೀತಾ ನಾಮಪತ್ರ ಸಲ್ಲಿಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಗೌಡ ಸೌಮ್ಯ ಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಶಾಸಕ ಶಿವರಾಮೇಗೌಡ, ಎಂಎಲ್ಸಿ ಶ್ರೀಕಂಠೇಗೌಡ ಮತ್ತಿತರರು ಹಾಜರಿದ್ದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ವರಾಜ್ ಇಂಡಿಯಾ ಪಕ್ಷದ ಪ್ರತಿನಿಧಿಯಾಗಿ ದರ್ಶನ್ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ತಾಯಿ ಸುನಿತಾ ಪುಟ್ಟಣ್ಣಯ್ಯ ಬಡಗಲಪುರ ನಾಗೇಂದ್ರ ಮತ್ತು ಅಪಾರ ಬೆಂಬಲಿಗರು ಹಾಜರಿದ್ದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪತ್ರಕರ್ತ ಹಾಗೂ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಸ್ಫರ್ಧಿಸುತ್ತಿದ್ದು , ನಿನ್ನೆ ತಹಸೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪಿ.ಎಸ್.ಮಹೇಶ್ಕುಮಾರ್ ನಾಮಪತ್ರ ಸಲ್ಲಿಸಿದರೆ, ಕೆ.ಆರ್.ಪೇಟೆ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ಉಮೇದುವಾರಿಕೆ ಸಲ್ಲಿಸಿದರು.