ಬೆಂಗಳೂರು, ಏ.20-ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಶ್ರೀರಾಮುಲು, ಸುರೇಶ್‍ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕುಮಾರಬಂಗಾರಪ್ಪ, ಸಿ.ಟಿ.ರವಿ ಸೇರಿದಂತೆ ವಿವಿಧ ಪಕ್ಷಗಳ ಘಟಾನುಘಟಿಗಳು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಮೈಸೂರು ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ತಮ್ಮ ಕುಟುಂಬದವರೊಂದಿಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ನಂತರ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ತಮ್ಮ ಪತ್ನಿ ಅನಿತಾಕುಮಾರಸ್ವಾಮಿ ಅವರೊಂದಿಗೆ ರಾಮನಗರದ ಚಾಮುಂಡೇಶ್ವರಿ ದೇವಾಲಯ ಹಾಗೂ ಬಿಡದಿ ಬಳಿಯ ಕೆಂಗಲ್ ಹನುಮಂತರಾಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಾರೀ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಅವರೂ ಕೂಡ ತಮ್ಮ ಅಪಾರ ಅಭಿಮಾನಿಗಳೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಭಾರೀ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇವರಿಗೆ ಸಾಥ್ ನೀಡಿದರು.
ಈ ಸಂದಭದಲ್ಲಿ ಮಾತನಾಡಿದ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರಿದ್ದೇನೆ. ನಮ್ಮ ಝಂಡಾ ಬದಲಾಗಿದೆ. ಅಭಿವೃದ್ಧಿಯ ಅಜೆಂಡಾ ಅದೇ ಇದೆ. ಈ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕೆಂದು ಮನವಿ ಮಾಡಿದರು.
ಮೈಸೂರಿನ ಕೃಷ್ಣ ರಾಜ ಕ್ಷೇತ್ರ ಟಿಕೆಟ್ ಇನ್ನೂ ಖಚಿತವಾಗಿಲ್ಲದಿದ್ದರೂ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎ.ರಾಮದಾಸ್ ಅವರು ಕೂಡ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಅಭ್ಯರ್ಥಿ ಕೆ.ಗೋಪಾಲಯ್ಯ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದರು.
ಬಿ.ಟಿ.ಎಂ ಲೇಔಟ್‍ನಿಂದ ರಾಮಲಿಂಗಾರೆಡ್ಡಿ ತಮ್ಮ ಮಿತ್ರರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಗಾಂಧಿನಗರದಿಂದ ದಿನೇಶ್‍ಗುಂಡೂರಾವ್ ನಾಮಪತ್ರ ಸಲ್ಲಿಸಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಝಡ್.ಜಮೀರ್‍ಅಹಮ್ಮದ್ ಖಾನ್ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಇಲ್ಲಿನ ಜಲಕಂಠೇಶ್ವರ ದೇವಾಲಯಕ್ಕೆ ತೆರಳಿ ಸಲ್ಲಿಸಿದರು.
ಇತ್ತ ಯಶವಂತಪುರದಲ್ಲಿ ಜೆಡಿಎಸ್‍ನ ಜವರಾಯಿಗೌಡ ಅವರು ಮೆರವಣಿಗೆ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದ್ದು, ವಿಶೇಷವಾಗಿತ್ತು.
ಜೆಡಿಎಸ್‍ನಿಂದ ಮಧುಗಿರಿಯಲ್ಲಿ ಎಂ.ವಿ.ವೀರಭದ್ರಯ್ಯ, ಶಿವಮೊಗ್ಗ ಗ್ರಾಮಾಂತರದಿಂದ ಶಾರದಾ ಪೂರ್ಯಾನಾಯ್ಕ್, ಹೆಬ್ಬಾಳದ ಎಂ.ಹನುಮಂತೇಗೌಡ, ಬಸವನಗುಡಿಯಿಂದ ಕೆ.ಬಾಗೇಗೌಡ ಮುಂತಾದವರು ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಚಿಕ್ಕಮಗಳೂರಿನಿಂದ ಸಿ.ಟಿ.ರವಿ ಉಮೇದುವಾರಿಕೆ ಸಲ್ಲಿಸಿದರೆ, ಹಿರಿಯ ಶಾಸಕರಾದ ಗೋವಿಂದ ಕಾರಜೋಳ ಅವರು ಮುಧೋಳದಿಂದ ನಾಮಪತ್ರ ಸಲ್ಲಿಸಿದರು.
ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಭಾರೀ ಜನಸ್ತೋಮದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಉದಯ್‍ಗರುಡಾಚಾರ್, ಕೇಂದ್ರ ಸಚಿವ ಅನಂತ್‍ಕುಮಾರ್, ಸಂಸದ ಪಿ.ಸಿ.ಮೋಹನ್ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.
ದಾಸರಹಳ್ಳಿಯಿಂದ ಮುನಿರಾಜು ತಮ್ಮ ಭಾರೀ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಅನಂತ್‍ಕುಮಾರ್ ಉಪಸ್ಥಿತರಿದ್ದರು.
ರಾಜಾಜಿನಗರ ಕ್ಷೇತ್ರದಿಂದ ಸುರೇಶ್‍ಕುಮಾರ್, ಬಸವನಗುಡಿಯಿಂದ ರವಿಸುಬ್ರಹ್ಮಣ್ಯ ನಾಮಪತ್ರ ಸಲ್ಲಿಸಿದರು.
ಬೊಮ್ಮನಹಳ್ಳಿಯಿಂದ ಸತೀಶ್‍ರೆಡ್ಡಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕೇಂದ್ರ ಸಚಿವ ಅನಂತ್‍ಕುಮಾರ್ ಉಪಸ್ಥಿತರಿದ್ದರು.
ಅಫ್ಜಲ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಮಾಲೀಕಯ್ಯ ಗುತ್ತೇದಾರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಖುದ್ದು ಬಿ.ಎಸ್.ಯಡಿಯೂರಪ್ಪ ಪಕ್ಷದ ಉಸ್ತುವಾರಿ ಮುರಳೀಧರ್ ಉಪಸ್ಥಿತರಿದ್ದುದು ವಿಶೇಷವಾಗಿತ್ತು.
ಕಾಗವಾಡ ಕ್ಷೇತ್ರದಿಂದ ಭರಮಗೌಡ ಎಚ್.ಕಾಗೆ, ರಾಯಭಾಗದಿಂದ ದುರ್ಯೋಧನ ಐಹೊಳೆ, ಬೈಲಹೊಂಗಲ- ಡಾ.ಎಚ್.ವಿಶ್ವನಾಥ್ ಪಾಟೀಲ್, ಶಿವಾಜಿನಗರ -ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಡೂರು -ಬಿ.ರಾಘವೇಂದ್ರ, ಹೊಸದುರ್ಗ-ಗೂಳೀ ಹಟ್ಟಿ ಶೇಖರ್, ಚಿಕ್ಕಪೇಟೆ -ಉದಯಗರುಡಾಚಾರ್, ಹೊಸಕೋಟೆ -ಶರತ್ ಬಚ್ಚೇಗೌಡ, ಬ್ಯಾಟರಾಯನಪುರ -ಆರ್.ರವಿ, ಶಾಂತಿನಗರ -ವಾಸುದೇವ್ ಮೂರ್ತಿ, ಜಮಖಂಡಿ -ಶ್ರೀಕಾಂತ್ ಕುಲಕರ್ಣಿ, ಶಿರಹಟ್ಟಿ -ರಾಮಣ್ಣಲಮಾಣಿ, ತೀರ್ಥಹಳ್ಳಿ – ಆರಗ ಜ್ಞಾನೇಂದ್ರ, ಮಹಾಲಕ್ಷ್ಮಿ ಲೇಔಟ್ -ನೆ.ಲ.ನರೇಂದ್ರಬಾಬು, ಸಾಗರದಿಂದ ಹರತಾಳ ಹಾಲಪ್ಪ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಇದಲ್ಲದೆ, ಕಾಂಗ್ರೆಸ್ ಪಕ್ಷದಿಂದ ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಶುಭ ಶುಕ್ರವಾರವಾದ ಇಂದು ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿ ಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುವುದಾಗಿ ಹೇಳಿ ಮೌಢ್ಯವನ್ನು ಹೊರಹಾಕಿದ್ದಾರೆ.