ಬೆಂಗಳೂರು,ಏ.20- ಕಾಂಗ್ರೆಸ್ ಬಂಡಾಯ ಶಮನಗೊಳಿಸಲು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಮುಂದಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಬಂಡಾಯ ಭುಗಿಲೆದಿದ್ದು, ಭಿನ್ನಮತ ಶಮನಕ್ಕೆ ಮುಂದಾಗಿರುವ ಅವರು ಬಂಡಾಯಗಾರರ ಮನವೊಲಿಸಲು ದೆಹಲಿಗೆ ಬುಲಾವ್ ನೀಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇನ್ನಿತರೆ ಮುಖಂಡರು ಬಂಡಾಯಗಾರರ ಮನವೊಲಿಸುವ ಪ್ರಯತ್ನ ಮಾಡಿ ಅವರನ್ನು ದೆಹಲಿಗೆ ಕರೆದುಕೊಂಡು ಬನ್ನಿ ಅವರ ಸೇವೆಯನ್ನು ಪಕ್ಷ ಪರಿಗಣಿಸುತ್ತದೆ. ಮುಂದಿನ ದಿನಗಳಲ್ಲಿ ಅವರಿಗೆ ಸ್ಥಾನಮಾನ ಕಲ್ಪಿಸುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ. ಅವರೊಂದಿಗೆ ಖುದ್ದು ಮಾತನಾಡಲು ಮುಂದಾಗಿದ್ದಾರೆ.
ಬಂಡಾಯಗಾರರು ಪಕ್ಷ ತೊರೆಯುತ್ತಿರುವುದು ಪಕ್ಷಕ್ಕೆ ಹಿನ್ನಡೆಯಾಗುವ ಸಾದ್ಯತೆ ಇದೆ.
ತರೀಕೆರೆ ಕ್ಷೇತ್ರದಿಂದ ಜಿ.ಎಚ್.ಶ್ರೀನಿವಾಸ್, ಬಳ್ಳಾರಿ ಗ್ರಾಮಾಂತರದಿಂದ ಎನ್.ವೈ.ಗೋಪಾಲಕೃಷ್ಣ , ಪುಲಿಕೇಶಿ ನಗರದಿಂದ ಪ್ರಸನ್ನಕುಮಾರ್, ದೇವನಹಳ್ಳಿಯಿಂದ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಪಕ್ಷ ತೊರೆಯುತ್ತಿರುವುದು ಆತಂಕದ ವಿಷಯವಾಗಿದೆ.
ಈ ಸಂಬಂಧ ಸ್ಥಳೀಯ ನಾಯಕರು ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಬೇಕಿತ್ತು. ಇನ್ನು ಕೆಲವೆಡೆ ಟಿಕೆಟ್ ವಂಚಿತರು ಪರ್ಯಾಯ ಚಿಂತನೆ ನಡೆಸಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಇನ್ನು ಬಿ ಫಾರಂ ದೊರೆಯದೆ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಎಲ್ಲರ ಬಳಿ ರಾಹುಲ್ ಅವರೆ ಖುದ್ದಾಗಿ ಮಾತನಾಡಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಕಷ್ಟಿದೆ. ಬೇರೆ ಅಧಿಕಾರದ ಅವಕಾಶ ತಮಗೆ ದೊರೆಯುತ್ತದೆ. ಅತೃಪ್ತರು ಯಾರೂ ಪಕ್ಷ ತೊರೆಯಬೇಡಿ ಎಂದು ರಾಹುಲ್ ಮನವಿ ಮಾಡಿದ್ದಾರೆ ಅಲ್ಲದೆ ಹಲವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷ. ಸಾಮಾಜಿಕ ನ್ಯಾಯದಡಿಯಲ್ಲಿ ಪಕ್ಷ ನಿಷ್ಠೆ ಹಿನ್ನೆಲೆಯಲ್ಲಿ ಒಂದಲ್ಲ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಗೆಲುವನ್ನು ಮಾನದಂಡವಾಗಿರಿಸಿಕೊಂಡು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಬಂಡಾಯಗಾರರು ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ರಾಹುಲ್ ಮನವಿ ಮಾಡಿದ್ದಾರೆ.