ಅಹಮದಾಬಾದ್, ಏ.20-ಹದಿನಾರು ವರ್ಷಗಳ ಹಿಂದೆ 97 ಜನರು ಬಲಿಯಾದ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಗುಜರಾತ್ ಹೈಕೋರ್ಟ್ ಇಂದು ದೋಷಮುಕ್ತಗೊಳಿಸಿದೆ.
ನ್ಯಾಯಮೂರ್ತಿಗಳಾದ ಹರ್ಷ ದೇವನಿ ಮತ್ತು ಎ.ಎಸ್.ಸುಪೆಹಿಯಾ ಅವರನ್ನು ಒಳಗೊಂಡ ಪೀಠ ತೀರ್ಪು ಪ್ರಕಟಿಸಿದರು. ಮಾಯಾ ಕೊಡ್ನಾನಿ ಅವರ ವಿರುದ್ಧ ದಾಖಲಾಗಿರುವ ಆರೋಪಗಳು ಸಾಬೀತಾಗಿಲ್ಲ ಎಂದು ತಿಳಿಸಿದ ನ್ಯಾಯಾಧೀಶರು ಅವರನ್ನು ಖುಲಾಸೆಗೊಳಿಸಿದರು.
ಇದೇ ಪ್ರಕರಣದಲ್ಲಿ ಗಲಭೆಯ ಮುಖ್ಯ ಸಂಚುಗಾರ ಭಜರಂಗ ದಳದ ಮಾಜಿ ನಾಯಕ ಬಾಬು ಭಜರಂಗಿ ಸೇರಿದಂತೆ ಇತರ 31 ಜನರ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ಗೋಧ್ರಾದಲ್ಲಿ ಸಬರಮತಿ ರೈಲಿಗೆ ಅಗ್ನಿಸ್ಪರ್ಶ ಮಾಡಿ ಕರ ಸೇವಕರನ್ನು ಉದ್ರಿಕ್ತ ಗುಂಪೆÇಂದು ಕೊಂದು ಹಾಕಿದ ನಂತರ ಗುಜರಾತ್ನಲ್ಲಿ ವ್ಯಾಪಕ ಕೋಮು ಗಲಭೆ ಭುಗಿಲೆದ್ದಿತು. ನರೋಡಾ ಪಾಟಿಯಾದಲ್ಲಿ 2002ರಲ್ಲಿ ಹಿಂಸಾಚಾರಕ್ಕೆ ಇಳಿದ ಗುಂಪು 97 ಮಂದಿಯನ್ನು ಕೊಂದು, ಅನೇಕರನ್ನು ಗಾಯಗೊಳಿಸಿತ್ತು.
ಆಗಸ್ಟ್, 2012ರಲ್ಲಿ ವಿಶೇಷ ತನಿಖಾ ತಂಡದ ನ್ಯಾಯಾಲಯವು ಮಾಯಾ ಕೊಡ್ನಾನಿ ಸೇರಿದಂತೆ 32 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಡ್ನಾನಿ ಅವರಿಗೆ 28 ವರ್ಷ ಸಜೆ, ಭಜರಂಗಿಗೆ ಸಾಯುವ ತನಕ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಆರೋಪಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.