ಕೊನೆಗೂ ಸಿಕ್ತು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಟಿಕೆಟ್
ಬೀದರ್: ಬಿಜೆಪಿ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಹುಮನಾಬಾದ್ ಕ್ಷೇತ್ರದಿಂದ ಮಾಜಿ ಶಾಸಕ ಸುಭಾಸ ಕಲ್ಲೂರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಡಾ. ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ದಕ್ಷಿಣ ಕ್ಷೇತ್ರದಿಂದ
ಕಾಂಗ್ರೆಸ್ನಿಂದ ಶಾಸಕ ಅಶೋಕ ಖೇಣಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಬಲವಾಗಿರುವ ಖೇಣಿ ಚುನಾವಣೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಇವರಿಗೆ ಮಣಿಸಲು ಬಿಜೆಪಿ ವರಿಷ್ಠರು ಯುವ ಮುಖಂಡ, ಕಳೆದ ಬಾರಿ ಕೆಜಿಪಿಯಿಂದ ಸ್ಪರ್ಧಿಸಿದ ಬೆಲ್ದಾಳೆಗೆ ಟಿಕೆಟ್ ಕೊಟ್ಟಿದ್ದು ಗಮನಾರ್ಹ. ಕಳೆದ ಹಲವು ವರ್ಷಗಳಿಂದ ಬೆಲ್ದಾಳೆ ಕ್ಷೇತ್ರ ಕೇಂದ್ರವಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಎಲ್ಲ ಊರುಗಳಲ್ಲಿಯೂ ನೆಟ್ ವರ್ಕ ಹೊಂದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಟಕ್ಕರ್ ನೀಡಲು ವರಿಷ್ಠರು ಬೆಲ್ದಾಳೆ ಅವರೇ ಸೂಕ್ತ ಎಂದಿರುವುದು ಗಮನಾರ್ಹ.