ಲಂಡನ್,ಏ.20
ಲಂಡನ್ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟೀಷ್ ವಿದೇಶಾಂಗ ಕಚೇರಿ ಶುಕ್ರವಾರ ಕ್ಷಮೆಯಾಚಿಸಿದೆ.
ಘಟನೆ ಕುರಿತಂತೆ ಹೇಳಿಕೆ ನೀಡಿರುವ ಲಂಡನ್ ವಿದೇಶಾಂಗ ಕಚೇರಿ ಮತ್ತು ಕಾಮನ್ ವೆಲ್ತ್ ಕಚೇರಿ, ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿದ್ದ ಕೆಲ ಸದಸ್ಯರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಯಶ್’ವರ್ಧನ್ ಕುಮಾರ್ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿಕೊಂಡಿದೆ.
ಇದರಂತೆ ವೆಬ್ ಪೋರ್ಟಲ್ ಕೂಡ ಘಟನೆ ಕುರಿತಂತೆ ವರದಿ ಮಾಡಿದ್ದು, ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಮತ್ತೆ ಭಾರತದ ತ್ರಿವರ್ಣ ಧ್ವಜ ಹಾರಿಸಲು ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಯಿಂದ ಭಾರತದೊಂದಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಮತ್ತಷ್ಟು ಹತ್ತಿರದಿಂದ ಜೊತೆಯಾಗಿ ಕಾರ್ಯನಿರ್ವಹಿಸಲು ನಾವು ಬಯಸಿದ್ದೇವೆಂದು ಬ್ರಿಟೀಷ್ ವಿದೇಶಾಂಗ ಕಚೇರಿ ಹೇಳಿಕೊಂಡಿದೆ.
ಈ ನಡುವೆ ಭಾರತೀಯ ಪತ್ರಕರ್ತರ ಸಮೂಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.