ಬೆಂಗಳೂರು,ಏ.19-ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಬಂಡಾಯವೆದ್ದಿರುವ 35 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಕಾಂಗ್ರೆಸ್ ವರಿಷ್ಠ ನಾಯಕರುಗಳಿಗೆ ಸಂಧಾನ ಮಾತುಕತೆಯ ಜವಾಬ್ದಾರಿ ಹಂಚಿಕೆಯಾಗಿದ್ದು, ಮೂರು ಕ್ಷೇತ್ರಗಳ ಮುಖಂಡರ ಜೊತೆ ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸಂಧಾನ ನಡೆಸಿದ್ದಾರೆ.
18 ಕ್ಷೇತ್ರಗಳಲ್ಲಿ ಬಂಡಾಯ ತೀವ್ರ ಸ್ವರೂಪದಲ್ಲಿದ್ದು , ಟಿಕೆಟ್ ವಂಚಿತರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಮಾಯಕೊಂಡ ಕ್ಷೇತ್ರ ಶಿವಮೂರ್ತಿ ನಾಯಕ್ ಅವರಿಗೆ ಟಿಕೆಟ್ ಸಿಗದೆ ಇರುವ ಹಿನ್ನೆಲೆಯಲ್ಲಿ ಬಂಡಾಯ ತೀವ್ರಗೊಂಡಿದ್ದು, ಶಾಮನೂರು ಶಿವಶಂಕರಪ್ಪ ಅವರನ್ನು ಸಿದ್ದರಾಮಯ್ಯ ಅವರು ಮನವೊಲಿಕೆಗೆ ಮುಂದಾಗಿದ್ದಾರೆ.
ತಿಪಟೂರು ಕ್ಷೇತ್ರದಲ್ಲಿ ನಂಜಾಮುರಿ ಅವರಿಗೆ ಟಿಕೆಟ್ ನೀಡಿದ್ದು, ಹಾಲಿ ಶಾಸಕ ಷಡಕ್ಷರಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಅವರನ್ನು ಸಂಧಾನಕ್ಕೆ ನಿಯೋಜಿಸಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ನೀಡಿರುವುದರಿಂದ ಬಂಡಾಯ ಮಾಡುತ್ತಿರುವ ಮಾಜಿ ಶಾಸಕ ಚಿಮ್ಮನಕಟ್ಟಿ ಅವರ ಮನವೊಲಿಕೆಗೆ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಪ್ರಯತ್ನಿಸುತ್ತಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ನೀಡಿರುವುದರಿಂದ ಬಂಡಾಯ ಎದ್ದಿರುವ ಹಾಲಿ ಶಾಸಕ ಮನೋಹರ್ ತಹಸೀಲ್ದಾರ್ ಅವರನ್ನು ಖುದ್ದು ಸಿದ್ದರಾಮಯ್ಯನವರೇ ಮಾತುಕತೆ ನಡೆಸುತ್ತಿದ್ದಾರೆ.
ಕೊಳ್ಳೆಗಾಲ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಟಿಕೆಟ್ ಸಿಕ್ಕಿದ್ದು , ಎಸ್.ಜಯಣ್ಣ ಬಂಡಾಯವೆದ್ದಿದ್ದು , ಸಂಸದ ಧ್ರುವನಾರಾಯಣ್, ಸಚಿವ ಮಹದೇವಪ್ಪ ಮಾತುಕತೆ ನಡೆಸುತ್ತಿದ್ದಾರೆ.
ಕೆಜಿಎಫ್ಗೆ ಸಂಸದ ಮುನಿಯಪ್ಪ ಅವರ ಪುತ್ರಿ ರೂಪಾ ಅವರಿಗೆ ಟಿಕೆಟ್ ನೀಡಿದ್ದು, ಅಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಶ್ರೀನಿವಾಸ್ ಬಂಡಾಯವೆದ್ದಿದ್ದಾರೆ.
ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಅಧ್ಯಕ್ಷ ಪರಮೇಶ್ವರ್ ಮಾತುಕತೆ ನಡೆಸುತ್ತಿದ್ದಾರೆ.
ಸಕಲೇಶಪುರ ಕ್ಷೇತ್ರಕ್ಕೆ ಹಿರಿಯ ಎಐಎಸ್ ಅಧಿಕಾರಿ ಸಿದ್ದಯ್ಯ ಅವರಿಗೆ ಟಿಕೆಟ್ ನೀಡಲಾಗಿದ್ದು, ಅಸಮಾಧಾನಗೊಂಡಿರುವ ಪ್ರಬಲ ಆಕಾಂಕ್ಷಿ ಚನ್ನಮಲ್ಲಯ್ಯ ಅವರೊಂದಿಗೆ ಪರಮೇಶ್ವರ್ ಚರ್ಚೆ ನಡೆಸುತ್ತಿದ್ದಾರೆ.
ದೇವನಹಳ್ಳಿ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಅವರ ಆಪ್ತ ವೆಂಕಟಸ್ವಾಮಿಗೆ ಟಿಕೆಟ್ ಸಿಕ್ಕಿದ್ದು , ಖರ್ಗೆ ಅವರ ಆಪ್ತ ನಾರಾಯಣಸ್ವಾಮಿ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಖರ್ಗೆ ಹರಸಾಹಸಪಡುತ್ತಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಎನ್ಎಸ್ಯುಐ ಅಧ್ಯಕ್ಷ ಮಂಜುನಾಥ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದ್ದು, ಬಂಡಾಯವೆದ್ದಿರುವ ಗಿರೀಶ್ ಕೆನಾಷಿಯ ಅವರೊಂದಿಗೆ ಪರಮೇಶ್ವರ್ ಚರ್ಚೆ ನಡೆಸುತ್ತಿದ್ದಾರೆ.
ಜಯನಗರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಟಿಕೆಟ್ ಸಿಕ್ಕಿದ್ದು , ಬಂಡಾಯವೆದ್ದಿರುವ ರಿಜ್ವಾನ್ ನವಾಬ್ ಅವರೊಂದಿಗೆ ವೇಣುಗೋಪಾಲ್ ಮತ್ತು ರಿಜ್ವಾನ್ ಹರ್ಷದ್ ಸಂಧಾನ ನಡೆಸುತ್ತಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಎಸ್.ಆರ್.ಪಾಟೀಲ್ ಕಣಕ್ಕಿಳಿಸಿದ್ದು, ಹಾಲಿ ಶಾಸಕ ಬಸವರಾಜ್ ಶಿವಣ್ಣನವರ್ ಬಂಡಾಯವೆದ್ದಿದ್ದಾರೆ. ಜಗಳೂರು ಕ್ಷೇತ್ರದಿಂದ ಪುಷ್ಪ ಅವರಿಗೆ ಟಿಕೆಟ್ ಸಿಕ್ಕಿದ್ದು, ಹಾಲಿ ಶಾಸಕ ಎಸ್.ಪಿ.ರಾಜೇಶ್ ಬಂಡಾಯವೆದ್ದಿದ್ದು ಅವರೊಂದಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚರ್ಚೆ ನಡೆಸುತ್ತಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸುಷ್ಮಾ ರಾಜಗೋಪಾಲ್ ರೆಡ್ಡಿ ಟಿಕೆಟ್ ದೊರೆತಿದ್ದು, ಪ್ರಬಲ ಆಕಾಂಕ್ಷಿ ಕವಿತಾ ರೆಡ್ಡಿ ಅವರೊಂದಿಗೆ ಡಿ.ಕೆ.ಶಿವಕುಮಾರ್ ಸಂಧಾನ ನಡೆಸುತ್ತಿದ್ದಾರೆ.
ಕಡೂರು ಕ್ಷೇತ್ರದಲ್ಲಿ ಕೆ.ಎಸ್.ಆನಂದ್ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರಬಲ ಆಕಾಂಕ್ಷಿ ಎನ್ನಲಾಗಿದ್ದ ಶರತ್ ಕೃಷ್ಣಮೂರ್ತಿ ಅವರೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸುತ್ತಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷೇತರರಾಗಿದ್ದ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗೆ ಟಿಕೆಟ್ ಸಿಕ್ಕಿದ್ದು, ಬಂಡಾಯವೆದ್ದಿರುವ ಎನ್.ಸಂಪಂಗಿ ಅವರೊಂದಿಗೆ ವೀರಪ್ಪ ಮೊಯ್ಲಿ ಮಾತುಕತೆ ನಡೆಸುತ್ತಿದ್ದಾರೆ.
ರಾಜಾಜಿನಗರದಲ್ಲಿ ಪದ್ಮಾವತಿ ಅವರಿಗೆ ಟಿಕೆಟ್ ಸಿಕ್ಕಿದೆ. ಮಂಜುಳಾ ನಾಯ್ಡು ಬಂಡಾಯವೆದ್ದಿದ್ದು , ಬಿ.ಕೆ.ಹರಿಪ್ರಸಾದ್ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ.
ದಾಸರಹಳ್ಳಿಯಲ್ಲಿ ಬಂಡಾಯ ಎದ್ದಿರುವ ತಿಮ್ಮನಂಜಯ್ಯ ಅವರಿಗೆ ಡಿಕೆಶಿ ಮತ್ತು ದಿನೇಶ್ ಗುಂಡೂರಾವ್ ಮಾತುಕತೆ ನಡೆಸುತ್ತಿದ್ದಾರೆ.
ಕಾರ್ಕಳದಲ್ಲಿ ಬಂಡಾಯದ ಬಾವುಟ ಹಿಡಿದಿರುವ ಉದಯ್ ಕುಮಾರ್ ಶೆಟ್ಟಿ ಅವರೊಂದಿಗೆ ಮಹದೇವಪ್ಪ ಮತ್ತು ರಮಾನಾಥ ರೈ ಮಾತುಕತೆ ನಡೆಸುತ್ತಿದ್ದಾರೆ.
ಮೂಡಬಿದರೆಯ ಮಿಥುನ್ ರೈ ಅವರೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡುತ್ತಿದ್ದಾರೆ.
ರಾಹುಲ್ ಗಾಂಧಿ ರಂಗ ಪ್ರವೇಶ:
ಬಂಡಾಯದ ಶಮನಕ್ಕೆ ಈ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಅವರೇ ರಂಗಪ್ರವೇಶ ಮಾಡಿದ್ದು, ಮೂರು ಕ್ಷೇತ್ರಗಳ ಆಕಾಂಕ್ಷಿಗಳೊಂದಿಗೆ ಖುದ್ದಾಗಿ ಮಾತುಕತೆ ನಡೆಸಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಉದ್ಯಮಿ ಅಶೋಕ್ಖೇಣಿಗೆ ಟಿಕೆಟ್ ನೀಡಿದ ಬೆನ್ನಲ್ಲೆ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಳಿಯ ಚಂದ್ರು ಸಿಂಗ್ ಬಂಡಾಯದ ಬಾವುಟ ಹಿಡಿದಿದ್ದು, ಅವರೊಂದಿಗೆ ಖುದ್ದಾಗಿ ರಾಹುಲ್ ಗಾಂಧಿ ಅವರೇ ಮಾತುಕತೆ ನಡೆಸಿದ್ದಾರೆ.
ವಿಜಯಪುರ ನಗರ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಮುಕ್ಬುಲ್ ಭಗವಾನ್ ಅವರೊಂದಿಗೂ ರಾಹುಲ್ ನೇರ ಮಾತುಕತೆ ನಡೆಸಿದ್ದಾರೆ. ಇನ್ನು ಪುಲಿಕೇಶಿ ನಗರ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಜೆಡಿಎಸ್ನತ್ತ ಮುಖ ಮಾಡಿರುವ ಪ್ರಸನ್ನ ಕುಮಾರ್ ಅವರೊಂದಿಗೆ ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ರಾಹುಲ್ ಮಾತುಕತೆ ನಡೆಸುತ್ತಿದ್ದಾರೆ.
ಕೆಲವು ಕ್ಷೇತ್ರಗಳಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ ಕಾಂಗ್ರೆಸ್ ನಾಯಕರು ಬಂಡಾಯ ತೀವ್ರಗೊಳ್ಳುತ್ತಿದ್ದಂತೆ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಂಡಿರುವುದು ಕಂಡುಬಂದಿದೆ. ಆದರೂ ಚುನಾವಣೆ ವೇಳೆ ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕೆ ವಹಿಸಲು ಉಭಯ ನಾಯಕರಿಗೆ ಜವಾಬ್ದಾರಿ ಹಂಚಿ ಅಸಮಾಧಾನವನ್ನು ನಿಭಾಯಿಸುವ ಪ್ರಯತ್ನ ನಡೆದಿದೆ. ಇದರ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.