ಜಮ್ಮು ಮತ್ತು ಕಾಶ್ಮೀರದ ಜನತೆಯ ಧೈರ್ಯ, ದಿಟ್ಟತನ ಮತ್ತು ಸಹಿಷ್ಣುತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ :

ಜಮ್ಮು, ಏ.19-ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಜನತೆಯ ಧೈರ್ಯ, ದಿಟ್ಟತನ ಮತ್ತು ಸಹಿಷ್ಣುತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ಸೂಚಿಸಿದ್ದಾರೆ.
ಜಮ್ಮುವಿನ ಅಮರ್ ಮಹಲ್ ಪ್ಯಾಲೇಸ್‍ನಲ್ಲಿ ಕಳೆದ ರಾತ್ರಿ ತಮ್ಮ ಗೌರವಾರ್ಥ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕ ವಿಷಯಗಳಲ್ಲಿ ಎದುರಾದ ಅನೇಕ ಸವಾಲುಗಳು, ಅಡ್ಡಿ-ಆತಂಕಗಳು ಮತ್ತು ಗಂಭೀರ ಬಿಕ್ಕಟ್ಟುಗಳಿಂದ ಏರಿಳಿತ ಕಂಡುಬಂದರೂ ಕಾಶ್ಮೀರದ ಜನತೆ ಎದೆಗುಂದದೆ ಅವುಗಳೆಲ್ಲ ಸಮರ್ಥವಾಗಿ ಎದುರಿಸಿದ್ದಾರೆ. ಅವರ ಧೈರ್ಯ ಮತ್ತು ದಿಟ್ಟತನಕ್ಕೆ ಭಾರತವು ಹೆಮ್ಮೆಪಡುತ್ತದೆ ಎಂದು ರಾಷ್ಟ್ರಪತಿ ನುಡಿದರು.
ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಮತ್ತು ಜನರು ತೋರುತ್ತಿರುವ ಬದ್ಧತೆ ಬಗ್ಗೆಯೂ ಪ್ರಶಂಸಿಸಿದ ಅವರು, ಕಾಶ್ಮೀರಗಳು ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳ ಬಳಕೆಯಲ್ಲಿ ತಮ್ಮ ಸಾಮಥ್ರ್ಯ ತೋರುತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ, ಕತುವಾ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಘಟನೆಯಲ್ಲಿ ಯಾವುದೇ ಉದ್ವೇಗ ಮತ್ತು ಪ್ರಚೋದನೆಗೆ ಒಳಗಾಗದೇ ಕಾಶ್ಮೀರದ ಜನತೆ ತೋರಿದ ಸೌಹಾರ್ದತೆ ಮತ್ತು ಶಾಂತ ಮನೋಭಾವವನ್ನು ಶ್ಲಾಘಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ