ಬೆಂಗಳೂರು, ಏ.18- ಇಂದಿನಿಂದ ವೃತ್ತಿಪರ ಕೋರ್ಸ್ಗಳಿಗೆ ಆರಂಭವಾದ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಬೆಂಗಳೂರು ನಗರದ 86 ಕೇಂದ್ರಗಳು ಸೇರಿದಂತೆ ರಾಜ್ಯದ 430 ಕೇಂದ್ರಗಳಲ್ಲಿ ನಡೆಯಿತು.
ಪ್ರಸ್ತುತ 2018-19ನೆ ಸಾಲಿನ ವಿವಿಧ ವೃತ್ತಿಪರ ಪ್ರವೇಶ ಕೋರ್ಸ್ಗಳಿಗಾಗಿ ಕರ್ನಾಟಕ ಪ್ರವೇಶ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆ ಇದಾಗಿದ್ದು , ಎಂಜಿನಿಯರಿಂಗ್, ತಂತ್ರಜ್ಞಾನ, ಡಿ ಫಾರ್ಮ್ ಹಾಗೂ ಕೃಷಿ ವಿಜ್ಞಾನ ಕೋರ್ಸ್ಗಳಿಗೆ ಪರೀಕ್ಷೆ ನಡೆಯಲಿದೆ.
ಬೆಳಗ್ಗೆ 10.30ರಿಂದ 11.30ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆದ ಗಣಿತ ಪರೀಕ್ಷೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 98,000 ವಿದ್ಯಾರ್ಥಿನಿಯರು ಪರೀಕ್ಷೆ ಬರೆದರು.
ಪರೀಕ್ಷಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಎಲೆಕ್ಟ್ರಾನಿಕ್ ವಸ್ತುಗಳು, ಕೈಗಡಿಯಾರಗಳ ನಿರ್ಬಂಧ, ಕೆಲವು ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು.
ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪೆನ್ನಲ್ಲಿ ಮಾತ್ರ ಉತ್ತರ ಬರೆಯಬೇಕಾಯಿತು. ಒಎಂಆರ್ನಲ್ಲಿಯೇ ನೋಂದಣಿ ಸಂಖ್ಯೆ ಮುದ್ರಿತವಾಗಿರುತ್ತದೆ.
ಪರೀಕ್ಷೆ ಸುಸೂತ್ರವಾಗಿ ನಡೆಯಲು 800 ವಿಶೇಷ ಜಾಗೃತಿ ದಳ ಸದಸ್ಯರು, 430 ಪ್ರಶ್ನೆಪತ್ರಿಕೆ ಪಾಲಕರು , 12,440 ಕೊಠಡಿ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದು , ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.