ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ: ಕೆಪಿಸಿಸಿ ಕಚೇರಿ ಎದುರು ಸಚಿವ ಡಿ.ಕೆ.ಶಿ ವಿರುದ್ಧ ಪ್ರತಿಭಟನೆ

ಬೆಂಗಳೂರು, ಏ.17- ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಜೋರಾಗಿದೆ. ಬಿಜೆಪಿಯಿಂದ ಬಂದ ಬೋರೇಗೌಡ ಅವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡಿದ್ದಕ್ಕೆ ಕಾಂಗ್ರೆಸ್ ಆಕಾಂಕ್ಷಿ, ಮಾಜಿ ಮೇಯರ್ ಕೆ.ಚಂದ್ರಶೇಖರ್ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಇಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದರು.

ಕಳೆದ ಆರು ತಿಂಗಳ ಹಿಂದಷ್ಟೆ ಬಿಜೆಪಿಯಿಂದ ಬಂದ ಬೋರೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಸಹಕಾರ ಸಂಘದಿಂದ ಆರ್ಥಿಕ ನೆರವು ನೀಡಿದ ಹಿನ್ನೆಲೆಯಲ್ಲಿ ಬೋರೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಲ್ಲದೆ, ಬೋರೇಗೌಡ ಅವರ ಸಹೋದರ ತಮ್ಮರಾಜು ಅವರು ಬಸವನಗುಡಿ ಜೆಡಿಎಸ್ ಅಧ್ಯಕ್ಷರಾಗಿದ್ದು, ಹೀಗಿದ್ದು ಕೂಡ ಅವರಿಗೆ ಟಿಕೆಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕೆ.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಬೇಕೆಂಬುದು ಎಲ್ಲರ ಒತ್ತಾಸೆಯಾಗಿತ್ತು. ಆದರೆ, ರಾಜ್ಯಸಭಾ ಸದಸ್ಯ ಜಿ.ಚಂದ್ರಶೇಖರ್ ಮತ್ತು ಜಿ.ಚಂದ್ರಶೇಖರ್ ಅವರು ಕೊನೆ ಕ್ಷಣದಲ್ಲಿ ಬೋರೇಗೌಡ ಅವರಿಗೆ ಒತ್ತಡ ತಂದು ಟಿಕೆಟ್ ಕೊಡಿಸಿದ್ದಾರೆ. ಇದರಲ್ಲಿ ಷಡ್ಯಂತ್ರವಿದೆ ಎಂದು ಇಲ್ಲಿನ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನು ಜಯನಗರದಲ್ಲಿ ಯು.ಬಿ.ವೆಂಕಟೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ