ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯ:

ನವದೆಹಲಿ/ಬೆಂಗಳೂರು, ಏ.17-ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿರುವ ಸಂದರ್ಭದಲ್ಲೇ ಬೆಂಗಳೂರು ವಕೀಲರು ನಾಳೆ ನವದೆಹಲಿಯಲ್ಲಿ ಭಾರತದ ಅಟಾರ್ನಿ ಜನರಲ್ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಿದ್ದಾರೆ.
ನ್ಯಾಯಾಂಗ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಪ್ರಕರಣಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಕೀಲರು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರ ನೇತೃತ್ವದಲ್ಲಿ ನಾಳೆ ನವದೆಹಲಿಯಲ್ಲಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇರಿದಂತೆ ಹಿರಿಯ ನ್ಯಾಯಾಧೀಶರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನ್ಯಾಯಮೂರ್ತಿಗಳೊಂದಿಗೂ ಸಮಾಲೋಚನೆಗೆ ಸಮಯ ನಿಗದಿಯಾಗಿದೆ.
ಬಹುದಿನಗಳ ಶ್ರಮದ ಫಲವಾಗಿ ದೇಶದ ಅತ್ಯುನ್ನತ ನ್ಯಾಯಾಂಗ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸುವ ಅವಕಾಶ ಲಭಿಸಿದೆ. ನ್ಯಾಯಾಂಗ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ, ಕರ್ನಾಟಕ ಹೈಕೋರ್ಟ್‍ನಲ್ಲಿ ದೀರ್ಘ ಕಾಲದಿಂದಲೂ ಬಾಕಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಅಟಾರ್ನಿ ಜನರಲ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡುವುದಾಗಿ ರಂಗನಾಥ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.  ನ್ಯಾಯಾಧೀಶರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಕುರಿತು ಸುಪ್ರೀಂಕೋರ್ಟ್ ಹಿರಿಯ ವಕೀಲ ಜೆ.ಚಲಮೇಶ್ವರ್ ಅವರು ಸಿಜೆಐ ದೀಪಕ್ ಮಿಶ್ರಾ ಅವರಿಗೆ ಇತ್ತೀಚೆಗೆ ಪತ್ರ ಬರೆದ ಬೆನ್ನಲ್ಲೇ ಬೆಂಗಳೂರು ವಕೀಲರ ನಾಳೆಯ ಉದ್ದೇಶಿತ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ