ಬೆಂಗಳೂರು, ಏ.16-ಬಾದಾಮಿ ಕ್ಷೇತ್ರದ ಬಿ ಫಾರಂ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿ ನನಗೇ ಸಿಗಲಿದೆ ಎಂಬ ವಿಶ್ವಾಸವನ್ನು ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ನನಗೆ ಭರವಸೆ ನೀಡಿದ್ದಾರೆ. ನಿನಗೇ ಟಿಕೆಟ್ ಕೊಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 2013ರಲ್ಲೂ ಇದೇ ರೀತಿ ಬೆಳವಣಿಗೆಯಾಗಿತ್ತು. ಕೊನೆ ಕ್ಷಣದಲ್ಲಿ ಬಿ ಫಾರಂ ನನಗೆ ನೀಡಲಾಗಿತ್ತು. ಈ ಬಾರಿಯೂ ಅದೇ ರೀತಿ ನಡೆಯಲಿದೆ ಎಂದು ಹೇಳಿದರು.
ನಾನು ಆರು ಬಾರಿ ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ. ಹಿರಿಯರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಚಿಮ್ಮನಕಟ್ಟಿ, ಕೊನೆಯಲ್ಲಿ ಸುಧಾರಿಸಿಕೊಂಡು ಪಕ್ಷ ತಮ್ಮನ್ನು ನಿರ್ಲಕ್ಷಿಸುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಪಾರ ಪ್ರಮಾಣದ ಬೆಂಬಲಿಗರು ನನ್ನೊಂದಿಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧಿಸುವುದಾದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ. ಅವರ ಹೊರತು ಇನ್ಯಾರಿಗೂ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ಡಾ.ದೇವರಾಜ್ ಪಾಟೀಲ್ ಅವರಿಗೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಈ ಬಗ್ಗೆ ನಾನು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾನು ನಿಮ್ಮನ್ನು ನಂಬಿದ್ದೆ. ಆದರೆ ಈ ರೀತಿ ಅನ್ಯಾಯವಾಗಬಾರದಿತ್ತು ಎಂದು ಹೇಳಿದ್ದೇನೆ. ತಪ್ಪನ್ನು ಸರಿಪಡಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಾನು ಆರೋಗ್ಯವಾಗಿದ್ದೇನೆ. ಅನಾರೋಗ್ಯದ ನೆಪ ತೋರಿಸಿ ಟಿಕೆಟ್ ವಂಚಿಸಲಾಗಿದೆ ಎಂಬುದು ಸುಳ್ಳು ಆರೋಪ.ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದ ಚಿಮ್ಮನಕಟ್ಟಿ, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್ನಲ್ಲೇ ಮುಂದುವರೆಯುತ್ತೇನೆ. ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಆದರೆ ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದು ಹೇಳಿದರು.