ಬೆಂಗಳೂರು,ಆ.9-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಮೂರನೆ ಅಲೆ ನಿಯಂತ್ರಿಸಲು ವೈದ್ಯರ ನಡೆ ಸೋಂಕಿತರ ಮನೆ ಕಡೆಗೆ ಎಂಬ ವಿನೂತನ ಕ್ರಮ ಕೈಗೊಂಡು ಸೋಂಕು ನಿಯಂತ್ರಣಕ್ಕೆ ಪಣ ತೊಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಮಾತನಾಡಿದ ಅವರು, ಇದೇ 16ರಿಂದ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಸೋಂಕಿತರ ಮನೆಗೆ ತೆರಳಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮ, ಚಿಕಿತ್ಸೆಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ವಾರ್ಡ್ ವೈದ್ಯರ ಜತೆಗೆ ಆಶಾಕಾರ್ಯಕರ್ತೆಯರು ಜತೆಗೂಡಲಿದ್ದಾರೆ ಎಂದರು.
ಯಾವುದೇ ವ್ಯಕ್ತಿಯಲ್ಲಿ ಪಾಸಿಟಿವ್ ಕಂಡು ಬಂದರೆ ತೆಗೆದುಕೊಳ್ಳಬೇಕಾದ ಔಷಧಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತೊಂದರೆಯಾಗದಂತೆ 108 ಆ್ಯಂಬುಲೆನ್ಸ್ ವಾಹನದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಹೇಳಿದರು.
ವೀಕೆಂಡ್ ಲಾಕ್‍ಡೌನ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಈಗಾಗಲೇ ರಾತ್ರಿ ಕಫ್ರ್ಯೂ ವಿಧಿಸಿದ್ದು, ವೀಕೆಂಡ್ ಲಾಕ್‍ಡೌನ್ ಅಸ್ತ್ರ ಪ್ರಯೋಗ ಸೇರಿದಂತೆ ಕಮರ್ಷಿಯಲ್ ಚಟುವಟಿಕೆಗಳಿಗೆ ನಿಯಮಾನುಸಾರ ಷರತ್ತುಗಳನ್ನು ವಿಧಿಸುವ ಕುರಿತು ಪಾಲಿಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಚಿಕ್ಕಪೇಟೆ, ಅವಿನ್ಯೂರೋಡ್, ಬಿ.ವಿ.ಐಯ್ಯಾಂಗಾರ್ ರಸ್ತೆ, ಗಾಂಧಿಬಜಾರ್, ಮಲ್ಲೇಶ್ವರಂ, ಕಮರ್ಷಿಯಲ್ ಸ್ಟ್ರೀಟ್, ಕಮ್ಮನಹಳ್ಳಿ ಮುಖ್ಯರಸ್ತೆ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವಾಣಿಜ್ಯ ಮಳಿಗೆಯ ಎಲ್ಲ ವ್ಯಾಪಾರಿಗಳು, ಮಾಲೀಕರು, ನೌಕರರು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ಗೆ ಒಳಪಡಬೇಕು. 15 ದಿನಕ್ಕೊಮ್ಮೆ ಎಲ್ಲರಿಗೂ ಕೋವಿಡ್ ರಿಪೋರ್ಟ್ ಕಡ್ಡಾಯವಾಗಿದೆ. ಒಂದು ವೇಳೆ ನಿರ್ಲಕ್ಷಿಸಿದರೆ ಅಂತವರ ಲೈಸೆನ್ಸ್ ನವೀಕರಣದ ವೇಳೆ ಕ್ರಮ ಜರುಗಿಸಲು ಪಾಲಿಕೆ ಚಿಂತನೆ ನಡೆಸಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್‍ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್. ವಿಶೇಷ ಆಯುಕ್ತರು, ಎಲ್ಲಾ ವಲಯಗಳ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಹಾಜರಿದ್ದರು.