ಬೆಂಗಳೂರು,ಜು.24- ಪ್ರತಿ ವರ್ಷ ಆಗಸ್ಟ್ 15ರಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ವಿಧಾನಸೌಧ ಮುಂದೆ ಆಚರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಧ್ವಜಾರೋಹಣ ಮಾಡುವ ಮೂಲಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರತಿ ಬಾರಿಯೂ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ನೆರವೇರಿಸಲಾಗುತ್ತದೆ. ಆದರೆ ಈ ಬಾರಿ ಆ ಸಂಪ್ರದಾಯ ಬದಲಾಗುವ ಲಕ್ಷಣ ಕಾಣುತ್ತಿದೆ.
ಕೋವಿಡ್ ಹಿನ್ನೆಲೆ ಕಳೆದ ವರ್ಷದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕಳೆದ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಗೌರವ ವಂದನೆ ತುಕಡಿ ಭಾಗವಹಿಸಿತ್ತು.
ನಿಯಮಿತ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಕೋವಿಡ್ ಹಿನ್ನೆಲೆಯಲ್ಲಿ ಸರಳ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗುವುದು.
ವಿಧಾನಸೌಧದ ಮುಂದೆ ಸ್ವಾತಂತ್ರ್ಯ ದಿನಾಚರಣೆ?
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸುವುದರ ಬದಲು ವಿಧಾನಸೌಧದ ಮುಂಭಾಗ ನೆರವೇರಿಸಲು ಚಿಂತನೆ ನಡೆದಿದೆ.
ವಿಧಾನಸೌಧದ ಆವರಣದಲ್ಲಿ ಸರಳವಾಗಿ ಸ್ವಾತಂತ್ರೋತ್ಸವ ನಡೆಸಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ರಾಜ್ಯ ಸರ್ಕಾರವೂ ವಿಧಾನಸೌಧದ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ ನಡೆಸಲು ಒಲವು ತೋರಿದೆ.
ಹೀಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಧಾನಸೌಧದ ಮುಂಭಾಗ ಮಾಡುವುದು ಬಹುತೇಕ ಖಚಿತವಾಗಿದ್ದು, ಮುಂದಿನ ವಾರ ಈ ಬಗ್ಗೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.