ಸಂಸತ್ತಿನ ಬಜೆಟ್ ಅಧಿವೇಶನ ಇದೇ ತಿಂಗಳ 29ರಂದು ಆರಂಭವಾಗಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯಲ್ಲಿಂದು ಸುದ್ದಿಗಾರರಿಗೆ ವಿವರ ನೀಡಿದರು. ಬಜೆಟ್ ಅಧಿವೇಶನದ ಮೊದಲ ಭಾಗದ ಕಲಾಪಗಳು ಫೆಬ್ರವರಿ 15 ರಂದು ಅಂತ್ಯವಾಗಲಿದ್ದು, 12 ಕಲಾಪಗಳು ನಡೆಯಲಿವೆ. 2ನೇ ಭಾಗದ ಬಜೆಟ್ ಅಧಿವೇಶನ ಮಾರ್ಚ್ 8 ರಂದು ಆರಂಭವಾಗಿ ಏಪ್ರಿಲ್ 8 ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ 21 ದಿನ ಕಲಾಪಗಳು ಜರುಗಲಿವೆ. ಕೋವಿಡ್ -19 ಮಾರ್ಗಸೂಚಿ ಅನ್ವಯ, ಆಸನ ವ್ಯವಸ್ಥೆ ಮಾಡಲಾಗುವುದು. ರಾಜ್ಯಸಭಾ ಕಲಾಪಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ ನಡೆಯಲಿವೆ. ಲೋಕಸಭಾ ಕಲಾಪಗಳು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಜರುಗಲಿವೆ.ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಬಜೆಟ್ ಅಧಿವೇಶನಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ.