ಪಟನಾ: ಗಂಗಾ ಕಣಿವೆಯ ಪ್ರದೇಶದಲ್ಲಿನ ಪ್ರಥಮ ಬೆಟ್ಟದ ಬೌದ್ಧ ವಿಹಾರವು ಬಿಹಾರದ ಲಖಿಸರೈ ಜಿಲ್ಲೆಯ ಲಾಲ್ ಪಹರಿಯಲ್ಲಿ ಪತ್ತೆಯಾಗಿದೆ ಎಂದು ಅದರ ಉತ್ಖನನ ತಂಡದ ನಿರ್ದೇಶಕ ಅನಿಲ್ ಕುಮಾರ್ ಹೇಳಿದ್ದಾರೆ.
ಬಿಹಾರ ಪರಂಪರೆ ಅಭಿವೃದ್ಧಿ ಸೊಸೈಟಿ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ ಜತೆಯಾಗಿ ಕೈಗೊಂಡ ಉತ್ಖನನ ಸಂದರ್ಭದಲ್ಲಿ ಈ ಬೌದ್ಧ ವಿಹಾರ ಪತ್ತೆಹಚ್ಚಲಾಗಿದ್ದು, ಇದು ಮಹಾಯಾನ ಬೌದ್ಧ ರ ಬಹುದೊಡ್ಡ ಕೇಂದ್ರವೆಂದು ನಂಬಲಾಗಿದೆ.
ಈ ಪ್ರದೇಶದಲ್ಲಿನ ಅನೇಕ ಕಡೆಗಳಲ್ಲಿ ಬೌದ್ಧ ವಿಹಾರಗಳನ್ನು ಕಂಡು ಹಿಡಿಯಲಾಗಿದೆ. ಆದರೆ, ಬೆಟ್ಟದ ತುದಿಯಲ್ಲಿ ಸ್ಥಾಪಿಲಾಗಿರುವ ಪ್ರಥಮ ಕೇಂದ್ರವಿದು. ಮಹಾಯಾನ ಪಂಥದ ಬೌದ್ಧರು ಜನಜೀವನದ ಜಂಜಾಟದಿಂದ ದೂರವಿದ್ದು ತಮ್ಮ ಆಚರಣೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು ಎಂಬುದು ತಿಳಿಯುತ್ತದೆ ಎಂದು ವಿಶ್ವಭಾರತಿ ವಿಶ್ವವಿದ್ಯಾಲಯದ ಡಾ. ಅನಿಲ್ಕುಮಾರ್ ಹೇಳಿದ್ದಾರೆ.