ಇಂಗ್ಲೆಂಡ್: ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆಸ್ಟ್ರಾಜೆನಿಕಾ ಔಷಧ ತಯಾರಕ ಸಂಸ್ಥೆಯಿಂದ ಅಭಿವೃದ್ಧಿಗೊಂಡಿರುವ ಕೊರೋನಾ ಲಸಿಕೆಗೆ ಬುಧವಾರ ಅನುಮೋದನೆ ನೀಡುವ ಮೂಲಕ ಜಗತ್ತಿನ ಮೊದಲ ರಾಷ್ಟ್ರವಾಗಿರುವ ಬ್ರಿಟನ್, ಜನವರಿ 4ರಿಂದ ಸಾಮೂಹಿಕ ಲಸಿಕಾ ಅಭಿಯಾನ ನಡೆಸಲಿದೆ.
ಆಸ್ಟ್ರಾಜೆನಿಕಾ ಲಸಿಕೆಯನ್ನು ಸಾಮಾನ್ಯ ಶೈತ್ಯಾಗಾರದಲ್ಲಿ ಸಾಗಣೆ ಮಾಡುವುದರ ಜತೆಗೆ ಸುಲಭವಾಗಿ ಸಂಗ್ರಹಿಸಬಹುದಾಗಿದೆ. ಹೀಗಾಗಿ ಹೆಚ್ಚಿನ ತಾಪಮಾನದ ಶೈತ್ಯಾಗಾರ ಅತ್ಯಗತ್ಯವಾಗಿರುವ ಫೈಜರ್, ಬಯೋಎನ್ಟೆಕ್ ಮತ್ತು ಮಾಡರ್ನಾಗಳಿಗೆ ಹೋಲಿಸಿದರೆ, ಈ ಲಸಿಕೆ ಅಗ್ಗ ಹಾಗೂ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯ.
ಕೊರೋನಾ ನಿರೋಧಕಕ್ಕಾಗಿ ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಲಸಿಕೆಯ ಬಳಕೆಗೆ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಕ ಸಂಸ್ಥೆ (ಎಂಎಚ್ಆರ್ಎ)ಯ ಶಿಫಾರಸ್ಸನ್ನು ಇಂದು ಅಂಗೀಕರಿಸಲಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸಕ್ತ ರೂಪಾಂತರಿ ವೈರಸ್ನಿಂದ ನಲುಗಿ ಹೋಗಿರುವ ಬ್ರಿಟನ್, ಜ. 4ರಂದು ಲಸಿಕೆಯನ್ನು ನೀಡುವ ಮೊದಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಬ್ರಿಟನ್ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.
ಇಂತಹ (ಲಸಿಕೆ)ಭರವಸೆಯ ಕ್ಷಣದೊಂದಿಗೆ ಬ್ರಿಟನ್ 2020ನ್ನು ಬೀಳ್ಕೊಡಲಿದೆ ಎಂದು ಹ್ಯಾನ್ಕಾಕ್ ಟ್ವೀಟ್ ಮಾಡಿದ್ದಾರೆ.
ಕೊರೋನಾ ನಿರೋಧಕ ಲಸಿಕೆಯು ಸಾಂಕ್ರಾಮಿಕದಿಂದ ಹೊರಬರುವ ಹಾದಿಯಾಗಿದೆ. ಈ ದಿಸೆಯಲ್ಲಿ ನಾವೆಲ್ಲ ಒಟ್ಟಿಗೆ ಸಾಗಬೇಕೆಂದು ಅವರು ಟ್ವಿಟರ್ನಲ್ಲಿ ದೇಶ ವಾಸಿಗಳಿಗೆ ಕರೆ ನೀಡಿದ್ದಾರೆ.