ವಿನಯ ಕುಲಕರ್ಣಿಗೆ ಜಾಮೀನು ನಿರಾಕರಣೆ

ಧಾರವಾಡ: ಜಿಪಂ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ.
ನ.9ಕ್ಕೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕುಟುಂಬಸ್ಥರ ಕೋರಿಕೆ ಮೇರೆಗೆ ವಿನಯ ಪರ ವಕೀಲ ಭರತ ಹಿಂಪಡೆದಿದ್ದರು. ಪುನಃ ವಕೀಲ ಬಾಹುಬಲಿ ನ.26ರಂದು ಜಾಮೀನು ಅರ್ಜಿ ಸಲ್ಲಿಸಿದರು. ನ.27ರಿಂದ ಡಿ. 9ರವರೆಗೆ ಅರ್ಜಿ ವಿಚಾರಣೆಯನ್ನು ಮುಂದೂಡುತ್ತ ಬರಲಾಗಿತ್ತು. ವಾದ-ಪ್ರತಿವಾದದ ನಂತರ ನ್ಯಾಯಾಲಯ ಡಿ.14ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸೋಮವಾರ ಸಾಕ್ಷಿ ನಾಶ, ಗಂಭೀರ ಆರೋಪ, ಪ್ರಭಾವಿ ವ್ಯಕ್ತಿ ಹಿನ್ನಲೆ ಕಾರಣಕ್ಕೆ ವಿನಯ್‍ಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿ ತೀರ್ಪು ಪ್ರಕಟಿಸಿದೆ.
ಜಾಮೀನು ಬಿಡುಗಡೆ ಕೋರಿ ವಿನಯ ಕುಲಕರ್ಣಿ ವಕೀಲ ಬಾಹುಬಲಿ ಧನವಡೆ ಅವರು ಧಾರವಾಡ ಹೈಕೋರ್ಟ್‍ಗೆ ಮೇಲ್ಮನವಿ ಹೋಗಲು ಪೂರಕ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿನಯ ಕುಲಕರ್ಣಿ ಅವರಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ಅವ ವಿಸ್ತರಿಸಿರುವುದರಿಂದ ಡಿ.21ರವರೆಗೆ ಬೆಳಗಾವಿ ಹಿಂಡಲಗಾ ಜೈಲೇ ಗತಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ