ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತೀರ್ಮಾನ ವಿರೋಧಿಸಿ ಕನ್ನಡಪರ ಸಂಘಟನೆಗಳು

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತೀರ್ಮಾನ ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ನಡೆಸಲು ಉದ್ದೇಶಿಸಿರುವ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ನಾಳೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಮತ್ತು ಮೆಟ್ರೋ ನಿಗಮದ ಸೇವೆ ಎಂದಿನಂತೆ ಮುಂದುವರೆಯಲಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಆಟೋ, ಟ್ಯಾಕ್ಸಿ ಚಾಲಕರ ಸಂಘ ನಾಳಿನ ಬಂದ್‍ಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿವೆ. ಆಸ್ಪತ್ರೆ ಸೇವೆಗಳು, ಹಾಲು, ತರಕಾರಿ, ದಿನಪತ್ರಿಕೆ ವಿತರಣೆ ಕೆಲಸಗಳು ಎಂದಿನಂತೆ ಸಾಗಲಿವೆ. ಈ ನಡುವೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡದ ಕೆಲಸ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಆದ್ದರಿಂದ ಕನ್ನಡಪರ ಸಂಘಟನೆಗಳು ಮುಷ್ಕರ, ಬಂದ್ ವಾಪಸ್ ಪಡೆದು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಈ ನಡುವೆ ಕಾರವಾರದಲ್ಲಿಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂದ್‍ನಿಂದ ಜನಸಾಮಾನ್ಯರಿಗೆ ಅನಾನುಕೂಲವಾಗಲಿದ್ದು, ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗುತ್ತದೆ. ಈ ಕಾರಣಗಳಿಂದ ಬಂದ್ ವಾಪಸ್ ಪಡೆಯುವಂತೆ ಕನ್ನಡ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್, ಬಂದ್ ನಡೆಸಲು ಅನುಮತಿ ನೀಡುವಂತೆ ಯಾವುದೇ ಸಂಘಟನೆ ಮನವಿ ಮಾಡಿಲ್ಲ, ಹೀಗಾಗಿ ಅನುಮತಿ ನೀಡಿಲ್ಲ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ ಸಭೆ, ಪ್ರತಿಭಟನಾ ಸಮಾವೇಶಗಳಿಗೆ ಅವಕಾಶವಿಲ್ಲ. ನಗರಾದ್ಯಂತ ಬಿಗಿಬಂದೋಬಸ್ತ್ ಮಾಡಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಪೊಲೀಸರು, 30 ಕೆಎಸ್‍ಆರ್‍ಪಿ ಪ್ಲಟೂನ್, 20 ಕೇಂದ್ರ ಸಶಸ್ತ್ರ ಪಡೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜನೆ ಮಾಡಲಾಗಿದೆ ಎಂದು ಕಮಲ್‍ಪಂಥ್ ಹೇಳಿದರು.
ಬೆಂಗಳೂರಿನಲ್ಲಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ನಿಗದಿಯಂತೆ ನಾಳೆ ಕರ್ನಾಟಕ ಬಂದ್ ನಡೆಯಲಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ