ಉಜಿರೆ: ರೋಗಿಗಳು, ನಿರ್ಗತಿಕರು, ಅಸಹಾಯಕರು, ವಿಧವೆಯರು ಹಾಗೂ ಬಡವರ ಕಷ್ಟಕಾರ್ಪಣ್ಯಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಅವರ ದುಃಖವನ್ನು ನಿವಾರಿಸಿ ಶಾಂತಿ, ನೆಮ್ಮದಿಯಜೀವನ ನಡೆಸುವಂತೆ ಅಭಯ ನೀಡುವುದೇ ವಾತ್ಸಲ್ಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ `ವಾತ್ಸಲ್ಯ’ ಸಮಾಜ ಬಾಂಧವರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಿಟ್ ವಿತರಿಸಿ ಮಾತನಾಡಿ, ಯಾವುದೇ ವಸ್ತು ಅಥವಾ ಪ್ರಾಣಿಗೆ ಬೆಲೆ ಕಟ್ಟಬಹುದು.ಆದರೆ, ಮನುಷ್ಯನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಡತನ ಎಂಬುದು ಶಾಪವಲ್ಲ. ಅವರವರ ಕರ್ಮವೂ ಅಲ್ಲ. ಸಹಾನುಭೂತಿಯಿಂದ ಮಾನವೀಯತೆಯೊಂದಿಗೆ ನೊಂದವರಿಗೆ ಅಭಯ ನೀಡಿ ನೆಮ್ಮದಿಯ ಜೀವನ ನಡೆಸಲು ನೆರವಾಗುವುದೇ ಮಾನವಧರ್ಮಎಂದು ಅವರು ಅಭಿಪ್ರಾಯಪಟ್ಟರು.
ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿ:
ಅಧ್ಯಕ್ಷತೆ ವಹಿಸಿದ ಧರ್ಮಾಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ಮಾರ್ಗದರ್ಶನ ನೀಡುವುದೇ `ವಾತ್ಸಲ್ಯ’ ಯೋಜನೆಯ ಉದ್ದೇಶವಾಗಿದೆ ಎಂದರು.
ಹಿರಿಯರು ಮಾತಿನಲ್ಲಿ ಶಾಪ ಕೊಡಬೇಕಾಗಿಲ್ಲ. ಮನದಲ್ಲಿ ನೊಂದು ಕಣ್ಣೀರು ಹಾಕಿದರೂ, ಅವರ ಕಣ್ಣೀರೇ ಶಾಪವಾಗಿ ಪರಿಣಮಿಸುತ್ತದೆ. ಆಧುನಿಕ ಸಮಾಜದಲ್ಲಿ ನಿರ್ಗತಿಕರನ್ನು, ರೋಗಿಗಳನ್ನು, ವೃದ್ಧರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ-ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೇ `ವಾತ್ಸಲ್ಯ’ ಯೋಜನೆಯ ಉದ್ದೇಶ ಎಂದು ಅವರು ವಿವರಿಸಿದರು.
ಈ ವೇಳೆ ಡಿ. ಹರ್ಷೇಂದ್ರಕುಮಾರ್, ಡಾ. ಬಿ. ಯಶೋವರ್ಮ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬೆಂಗಳೂರಿನ ವಿ.ರಾಮಸ್ವಾಮಿ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ವಂದಿಸಿದರು. ನಿರ್ದೇಶಕಿ ಮಮತಾರಾವ್ ಕಾರ್ಯಕ್ರಮ ನಿರ್ವಹಿಸಿದರು.