ಮದ್ದೂರು : ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಡೆದ ದಿವಂಗತ ಅಂಬರೀಶ್ ರವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಜರುಗಿತು.
ಬೆಂಗಳೂರಿನಿಂದ ಮಧ್ಯಾಹ್ನ 12 -45 ಸುಮಾರಿಗೆ ಹೊಟ್ಟೆಗೌಡನದೊಡ್ಡಿ ಸಂಸದೆ ಸುಮಲತಾ ಅವರೊಂದಿಗೆ ಆಗಮಿಸಿದ್ದ ಚಿತ್ರ ನಟರಾದ ದರ್ಶನ್, ಅಭಿಷೇಕ್ ಅಂಬರೀಶ್ ಸೇರಿದಂತೆ ಗಣ್ಯರನ್ನು ಗ್ರಾಮದ ಪ್ರವೇಶ ದ್ವಾರದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು ಈ ವೇಳೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಸುಮಾಲತಾ , ದರ್ಶನ್ , ಅಭಿಷೇಕ್ ಅವರುಗಳಿಗೆ ಜೈಕಾರ ಹಾಕಿ ಹೂಮಳೆಗೈದರು.
ನಂತರ ಅಭಿಮಾನಿಗಳು ಗುಂಪು ಗುಂಪಾಗಿ ಮೊಬೈಲ್ ನಲ್ಲಿ ಮೆರವಣಿಗೆ ದೃಶ್ಯವನ್ನು ಸೆರೆಹಿಡಿಯಲು ಮುಗಿಬಿದ್ದರು ಇದರಿಂದ ನೂಕು ನುಗ್ಗಲು ಉಂಟಾಯಿತು ಅಭಿಮಾನಿಗಳ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಬಳಿಕ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.
ತರುವಾಯ ಅಂಬರೀಶ್ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲೂ ಸಹ ಚಿತ್ರ ನಟರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಲೆಕ್ಕಿಸದೆ ಅಭಿಮಾನಿಗಳು ಮತ್ತೆ ಮೊಬೈಲ್ ಗಳಲ್ಲಿ ದೃಶ್ಯವನ್ನು ಸೆರೆಹಿಡಿಯಲು ಮುಂದಾಗಿ ನೂಕು ನುಗ್ಗಲು ಉಂಟಾಯಿತು ಆಗಲೂ ಸಹ ತಾಳ್ಮೆ ಕಳೆದು ಕೊಂಡ ಪೊಲೀಸರು ಗುಂಪು ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದರು.