ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚನೆ ಮಾಡಲಾಗಿರುವ ಕಾರ್ಯಪಡೆ ತನ್ನ ಅಂತಿಮ ಶಿಫಾರಸುಗಳ ಕರಡನ್ನು ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದ ಬಗ್ಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇಂದು ಆಯೋಜಿಸಿದ್ದ ವೆಬಿನಾರ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಕಾರ್ಯಪಡೆ ಈಗಾಗಲೇ ಪ್ರಾಥಮಿಕ ಹಂತದ ಶಿಫಾರಸುಗಳನ್ನು ಸಲ್ಲಿಸಿದೆ. ಅಂತಿಮ ಹಂತದ ಶಿಫಾರಸುಗಳನ್ನು ನಾಡಿದ್ದು, ಶನಿವಾರ ಸಲ್ಲಿಸಲಿದೆ ಎಂದರು. ಉಳಿದೆಲ್ಲ ರಾಜ್ಯಗಳಿಗಿಂತ ಮೊದಲೇ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವುದು ರಾಜ್ಯ ಸರಕಾರದ ಉದ್ದೇಶವಾಗಿದ್ದು, ಅಗತ್ಯ ಎಲ್ಲ ಹೆಜ್ಜೆಗಳನ್ನು ಇಡಲಾಗುತ್ತಿದೆ.ಇರುವ ವಿಶ್ವವಿದ್ಯಾಲಯಗಳಲ್ಲಿಯೇ 6 ಸಂಶೋಧನಾ ಹಾಗೂ 10 ಬೋಧನಾ ವಿಶ್ವವಿದ್ಯಾನಿಲಯಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಪಠ್ಯೇತರ ವಲಯದಲ್ಲಿದ್ದ ಕ್ರೀಡೆ, ಕಲೆ, ಸಂಗೀತ ಮತ್ತಿತರೆ ವಿಷಯಗಳೂ ಪಠ್ಯದ ವ್ಯಾಪ್ತಿಗೆ ಬರಲಿವೆ. ಅದರಿಂದ ಬಹು ಆಯಾಮದ ಪ್ರತಿಭೆಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಹೊಮ್ಮಲಿವೆ ಎಂದು ಡಾ. ಅಶ್ವತ್ ನಾರಾಯಣ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ