ಸವದತ್ತಿ: ಸಾರಿಗೆ ಸಂಸ್ಥೆ ಎಷ್ಟೇ ಸಂಕಷ್ಟದಲ್ಲಿದ್ದರೂ ಸಹಿತ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಆಗಿರುವಂತ ಲಾಕ್ಡೌನ್ ಸಮಯದಿಂದ ಇಲ್ಲಿಯವರೆಗೆ ರಾಜ್ಯದಲ್ಲಿನ ನಾಲ್ಕು ಸಾರಿಗೆ ನಿಗಮಗಳು ಸಂಪೂರ್ಣ ಹಾನಿಯಲ್ಲಿವೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ 4 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರವು ಸಾರಿಗೆ ನೌಕರರ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿದ್ದು, ಲಾಕ್ಡೌನದಲ್ಲಿ ಆಗಿರುವ ತೊಂದರೆ ಸಾರಿಗೆ ನೌಕರರ 6 ತಿಂಗಳ ಸಂಬಳವನ್ನು ಸರಕಾರವು ಭರಿಸಿರುವುದು ಸ್ವಾಗತಾರ್ಹ ಎಂದರು. ಮುಂದಿನ ಜನೆವರಿಯವರೆಗೆ ಸರಕಾರ ಸಾರಿಗೆ ನೌಕರರ ಸಂಬಳ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿಸಿರುವುದಾಗಿ ಹೇಳಿದರು.
ಬಡವರ ಮತ್ತು ಮದ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆ ನಷ್ಟ ಅನುಭವಿಸಿದ್ದರು. 2014ರಿಂದ ಇಲ್ಲಿಯವರೆಗೆ ಪ್ರಯಾಣ ದರದಲ್ಲಿ ವ್ಯತ್ಯಾಸವನ್ನು ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯಲ್ಲಿ ಜನ ಸಂಚಾರ ಕಡಿಮೆಯಾಗುತ್ತಿದ್ದು, ಬರುವಂತ ಆದಾಯದಲ್ಲಿ ಡಿಸೈಲ್ಗೆ ಹಣ ಸರಿದೂಗುತ್ತಿಲ್ಲ ಎಂದರು.