ಜೈಪುರ :ರಾಜಸ್ಥಾನದ ಬಿಕನೇರ್ ಬಳಿ ಇರುವ ಥಾರ್ ಮರುಭೂಮಿಯ ಮಧ್ಯ ಭಾಗದ ಮೂಲಕ 1.72 ಲಕ್ಷ ವರ್ಷದ ಹಿಂದೆಯೇ ನದಿಯೊಂದು ಹರಿಯುತ್ತಿತ್ತು ಎಂಬುದರ ಪುರಾವೆಯನ್ನು ಸಂಶೋಧಕರು ಪತ್ತೆಹಚ್ಚಿದ್ದು, ಈ ಪ್ರದೇಶದಲ್ಲಿ ಜನರು ವಾಸಿಸುವುದಕ್ಕೆ ಇದೇ ನದಿಯೇ ಜೀವಾನಾಧಾರ ವಾಗಿದ್ದಿರಬಹುದು ಎಂದು ತಿಳಿಸಿದ್ದಾರೆ.
ಜರ್ಮನಿಯ ದಿ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯುಮನ್ ಹಿಸ್ಟರಿ , ತಮಿಳುನಾಡಿನ ಅಣ್ಣಾ ವಿಶ್ವವಿಶ್ವವಿದ್ಯಾಲಯ ಹಾಗೂ ಕೋಲ್ಕತ್ತದ ಐಐಎಸಿಆರ್ ಸಂಶೋಧಕರು ಈ ಸಂಶೋಧನೆ ನಡೆಸಿದ್ದು, ಥಾರ್ ಮರುಭೂಮಿಯ ನಲ್ ಕ್ವಾರಿಯಲ್ಲಿ ನದಿ ಚಟುವಟಿಕೆಗಳಿತ್ತು ಎಂಬುದನ್ನು ದೃಢಪಡಿಸಿದ್ದಾರೆ.
ಪ್ರಸಕ್ತವಿರುವ ನದಿ ಪ್ರದೇಶದಿಂದ 200 ಕಿ.ಮೀ. ದೂರದಲ್ಲಿ ಈ ನದಿ ಹರಿಯುತ್ತಿದ್ದ ಪುರಾವೆಗಳು ಪತ್ತೆಯಾಗಿದ್ದು, ಇವು ಗಾಘ್ಘರ್ ಹಕ್ರಾ ನದಿಯ ಅವನತಿಯ ಬಗ್ಗೆಯೂ ಮಾಹಿತಿ ನೀಡಿವೆ. ಈ ನದಿ ಪ್ಯಾಲಿಯೋಲಿಥಿಕ್ ಜನಾಂಗಕ್ಕೆ ಜೀವಸೆಲೆ ಯಾಗಿದ್ದಲ್ಲದೆ, ವಲಸೆಗೆ ಪ್ರಮುಖ ಕಾರಿಡಾರ್ ಕೂಡ ಆಗಿತ್ತು.
ಥಾರ್ ಮರುಭೂಮಿಯು ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆಯಲ್ಲದೆ, ಈ ಅರೆ-ಶುಷ್ಕ ಭೂಮಿಯಲ್ಲಿ ಜನರ ವಾಸ್ತವ್ಯ ಹೇಗಿತ್ತು ಎಂಬುದರ ಬಗ್ಗೆಯೂ ಈ ಸಂಶೋಧನೆ ಬೆಳಕು ಚೆಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.