ಬೆಂಗಳೂರು: ದೇಶೀಯವಾಗಿ ನಿರ್ಮಿತವಾಗಿರುವ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ನ ಡೆಮೋ ಸಂಚಾರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹಸಿರು ನಿಶಾನೆ ತೋರಿದ್ದು, ಒಂದು ತಿಂಗಳು ಪ್ರಾಯೋಗಿಕ ಸಂಚಾರ ನಡೆಸಲಿದೆ.
ಶಾಂತಿನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೇಂದ್ರ ಕಚೇರಿ ಆವರಣದಲ್ಲಿ ತೆಲಂಗಾಣ ಮೂಲದ ಓಲೆಕ್ಟ್ರಾ ಕಂಪನಿಯಿಂದ ನಿರ್ಮಿತವಾಗಿರುವ ಎಲೆಕ್ಟ್ರಿಕ್ ಬಸ್ ಚಾಲನೆ ನೀಡಿದ ನಂತರ ಅದೇ ಬಸ್ ಮೂಲಕ ವಿಧಾನಸೌಧಕ್ಕೆ ತೆರಳಿದರು. ಅಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಶೀಲನೆ ನಡೆಸಿ ಶ್ಲಾಘನೆ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ತೆಲಂಗಾಣದ ಓಲೆಕ್ಟ್ರಾ ಕಂಪನಿ ನಿರ್ಮಿಸಿದ ಈ ಬಸ್ನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗುವುದು. ಸುಮಾರು 2 ಕೋಟಿ ವೆಚ್ಚ ಆಗಲಿದೆ. ಅಲ್ಲದೆ ಇದರ ನಿರ್ವಹಣೆ ಕೂಡ ಕಂಪನಿ ನೋಡಿ ಕೊಳ್ಳಲಿದ್ದು, ಕಿಲೋ ಮೀಟರ್ ಲೆಕ್ಕದಲ್ಲಿ ಹಣ ನೀಡುವುದರಿಂದ ಸರ್ಕಾರಕ್ಕೆ ಹೊರೆ ಬೀಳುವುದಿಲ್ಲ ಎಂದರು.
ಒಟ್ಟು 300 ಎಲೆಕ್ಟ್ರಿಕ್ ಬಸ್ಗಳನ್ನು ಪಡೆಯುವ ಉದ್ದೇಶವಿದ್ದು, ಓಲೆಕ್ಟ್ರಾ ಕಂಪನಿಯಂತೆ ಎರಡು ಮೂರು ಕಂಪನಿಗಳು ಎಲೆಕ್ಟ್ರಿಕ್ ಬಸ್ ನೀಡಲು ಮುಂದೆ ಬಂದಿವೆ. ಎಲ್ಲಾ ಮಾದರಿಯಲ್ಲೂ ಪರೀಕ್ಷೆ ನಡೆಸಿ ನಂತರ ಬಸ್ಗಳನ್ನು ಪಡೆಯಲಾಗುವುದು. ಪ್ರಯಾಣ ದರ ನಿಗದಿಪಡಿಸಬೇಕಾಗಿದ್ದು, ಇಂತಹ ಬಸ್ಗಳ ಚಾಲನೆಗೆ ನಮ್ಮ ಚಾಲಕರಿಗೆ ತರಬೇತಿ ನೀಡಲಿದ್ದೇವೆ ಎಂದರು.
ಕೇಂದ್ರ ಸರ್ಕಾರ ಫೇಮ್ 2 ಯೋಜನೆಯಲ್ಲಿ ಪ್ರತಿ ಬಸ್ಗೆ 55ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ 33.33 ಲಕ್ಷ ರೂ. ಆರ್ಥಿಕ ಸಹಾಯಧನದ ನೀಡಲಿದೆ. ಇದನ್ನು ಸಂಯೋಜಿಸಿ ಕೊಂಡು ಪ್ರತಿ ಬಸ್ಗೆ 88.33 ಲಕ್ಷ ರೂ.ನಂತೆ ಫೇಮ್ 2 ಯೋಜನೆಯಲ್ಲಿ 300 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆ ನಡೆಸಲು ಹೊಸ ಟೆಂಡರ್ ಪ್ರಕ್ರಿಯೆ ಕರೆಯಲು ರಾಜ್ಯ ಸರ್ಕಾರದ ಅನುಮತಿ ಕೋರಲಾಗಿದೆ. ಅಲ್ಲದೆ 500 ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯಧನ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಈ ವೇಳೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ನಿರ್ದೇಶಕ ಡಾ.ಅರುಣ್ ಸೇರಿದಂತೆ ಇನ್ನಿತರ ಅಕಾರಿಗಳು ಉಪಸ್ಥಿತರಿದ್ದರು