ವಲಸೆ ಪ್ಲ್ಯಾನ್ ಕೈಬಿಟ್ಟು ಬಿದಿರ ಕಸುಬಲ್ಲಿ ಬದುಕು ಕಾಣ್ತಿದ್ದಾರೆ ಇಲ್ಲಿನ ವನವಾಸಿಗಳು

ಭೋಪಾಲ್: ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಪ್ರತೀ ಗ್ರಾಮಗಳಲ್ಲೀಗ ಬಿದಿರಿನದೇ ಕಾರುಬಾರು ಅನ್ನುವುದಕ್ಕಿಂತಲೂ ಗ್ರಾಮಗಳ ವನವಾಸಿ ಯುವಕ ಯುವತಿಯರೆಲ್ಲರು ಬಿದಿರಿನಿಂದ ನಾನಾ ವಿಧದ ಆಕರ್ಷಕ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಬಿಝಿ.
ದಸರಾ ಬಳಿಕ ಬರುವ ಬೆಳಕಿನ ಹಬ್ಬ ದೀಪಾವಳಿಗೆ 1ಲಕ್ಷ ಬಿದಿರಿನ ದೀಪಗಳನ್ನು ತಯಾರಿಸಿ ಕೊಡುವಂತೆ ಈ ವನವಾಸಿ ತಂಡಕ್ಕೆ ಆರ್ಡರ್ ಬಂದಿದೆ. ಹಬ್ಬಕ್ಕೆ ಮುನ್ನ ಸಣ್ಣ ಮತ್ತು ದೊಡ್ಡ ಬಿದಿರ ದೀಪಗಳನ್ನು ತಯಾರಿಸಿಕೊಡೋ ನಿಟ್ಟಿನಲ್ಲಿ ಸುಮಾರು 60ಮಂದಿ ನುರಿತ ವನವಾಸಿ ತಂಡ ಕಾರ್ಯ ನಿರತವಾಗಿದೆ. ಆರ್ಡರ್ ಪೈಕಿ ಶೇ.10ದೀಪಗಳನ್ನು ತಯಾರಿಸಿಯಾಗಿದೆ. 90,000 ದೀಪಗಳನ್ನು ರೆಡಿಮಾಡಿಕೊಡಲು ಯುವ ತಂಡ ಅಹೋರಾತ್ರಿ ಶ್ರಮಿಸುತ್ತಿದೆ. ಅಂದ ಹಾಗೆ, ಯುವ ವನವಾಸಿಗಳ ಸ್ವಾವಲಂಬನೆಗೆ ಆಧಾರವಾಗಿರುವ ಈ ಕಸುಬನ್ನು ಇವರಿಗೆ ಕಲಿಸಿಕೊಟ್ಟದ್ದು ಮತ್ತು ಈಗಲೂ ಕಲಿಸುತ್ತಿರುವವರು, ಅರ್ಧಕ್ಕೇ ಶಾಲೆಬಿಟ್ಟ ಯುವಜೋಡಿ ಕೃಷ್ಣಾ ಮತ್ತು ಲತಾ ನಿನಾಮ. ಇವರ ಹಿಂದಿದೆ ಎನ್‍ಜಿಒ ಶಿವಗಂಗಾ ಸಮಗ್ರ ಗ್ರಾಮವಿಕಾಸ ಪರಿಷದ್. ಯುವ ವನವಾಸಿಗಳ ವಲಸೆ ತಡೆದು, ಸ್ವಂತ ನಾಡಲ್ಲೇ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ 2014ರಲ್ಲಿ ಪರಿಷದ್ ಈ ತೆರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಆಗ ತರಬೇತಿಗೆ ಬರುತ್ತಿದ್ದವರು ಬರೇ 25ರಿಂದ 50ಮಂದಿ.ಆದರೆ ಸದ್ಯ ಸದಸ್ಯರ ಸಂಖ್ಯೆ ಬರೋಬ್ಬರಿ 900 ಮೀರಿದೆ. ಇವರೆಲ್ಲರು ಜಿಲ್ಲೆಯ ಸುಮಾರು 25ಗ್ರಾಮಗಳ ನಿವಾಸಿಗಳು. ಇಂತಹ ಒಂದು ಆಕರ್ಷಕ ತರಬೇತಿ ಕಾರ್ಯಕ್ರಮ ಇಲ್ಲದಿರುತ್ತಿದ್ದಲ್ಲಿ ಈ ಯುವಕ ಯುವತಿಯರು ಉದ್ಯೋಗವರಸಿ ನೆರೆಯ ಗುಜರಾತ್, ರಾಜಸ್ಥಾನಕ್ಕೆ ವಲಸೆ ಹೋಗುವವರು. ಆದರೆ ಪರಿಷದ್ ಶ್ರಮದಿಂದ ವಲಸೆ ತಪ್ಪಿದೆ. 2030ರ ಸುಮಾರಿಗೆ ಸುಮಾರು 20ಸಾವಿರ ವನವಾಸಿ ಕುಟುಂಬಗಳ ವಲಸೆ ತಡೆಯುವುದು ಪರಿಷದ್ ಗುರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ