ಹೊಸದಿಲ್ಲಿ : ಹತ್ರಾಸ್ ಪ್ರಕರಣ ಬಳಸಿಕೊಂಡು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅತ್ಯಾಚಾರ ಆರೋಪಿಗಳಲ್ಲಿ ಒಬ್ಬನು ಸಂತ್ರಸ್ತೆ ಕುಟುಂಬಕ್ಕೆ ಕಳೆದೊಂದು ವರ್ಷದಿಂದ ಪರಿಚಿತನಾಗಿದ್ದ ಎಂಬ ವಿಚಾರವನ್ನು ಉತ್ತರ ಪ್ರದೇಶ ಪೋಲೀಸರು ಬಹಿರಂಗಪಡಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣದ ತನಿಖೆಯನ್ನು ಎಸ್ಐಟಿಗೆ ಒಪ್ಪಿಸಿದ್ದು, ತನಿಖೆ ಮುಂದುವರಿದಂತೆಲ್ಲ ದಿನಕ್ಕೊಂದು ಹೊಸ ಮಾಹಿತಿ ಹೊರ ಬೀಳುತ್ತಲೇ ಇದೆ.
ಈ ಬೆನ್ನಲ್ಲೇ, ಸಂಶಯ ಹುಟ್ಟುಹಾಕುವಂತಹ ಮತ್ತೊಂದು ವಿಚಾರವನ್ನು ಉತ್ತರ ಪ್ರದೇಶ ಪೋಲೀಸರು ಬಹಿರಂಗಗೊಳಿಸಿದ್ದು, ಆರೋಪಿಗಳಲ್ಲಿ ಒಬ್ಬನಾದ ಸಂದೀಪ್ ಠಾಕೂರ್ ಮತ್ತು ಸಂತ್ರಸ್ತೆ ಸಹೋದರ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ ಎಂದಿದ್ದಾರೆ.
ಆರೋಪಿ ಹಾಗೂ ಸಂತ್ರಸ್ತೆ ಅಣ್ಣನ ನಡುವೆ ಕಳೆದ ವರ್ಷ ಅಕ್ಟೋಬರ್ನಿಂದ ಈ ವರ್ಷದ ಮಾರ್ಚ್ ವರೆಗೆ 104 ಬಾರಿ ದೂರವಾಣಿ ಸಂಭಾಷಣೆ ನಡೆದಿದೆ ಎಂದು ಕಾಲ್ ರೆಕಾರ್ಡ್ನಿಂದ ತಿಳಿದುಬಂದಿದ್ದು, ಸಂತ್ರಸ್ತೆ ಸಹೋದರನನ್ನು ಕಾಲ್ ರೆಕಾರ್ಡ್ ಆಧಾರಗಳ ಮೇಲೆ ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹೊಸ ಸಾಕ್ಷಿಗಳು ಪೋ ಲೀಸರು ಹೇಳುವಂತೆಯೇ ಸಂತ್ರಸ್ತೆಗೆ ಅತ್ಯಾಚಾರ ಆರೋಪಿಯು ಮೊದಲೇ ಪರಿಚಿತ ಎಂಬ ವಾದಕ್ಕೆ ಒತ್ತು ನೀಡುತ್ತಿದೆ ಎನ್ನಲಾಗಿದೆ.
ಅಲ್ಲದೆ, ಪ್ರಕರಣ ಸಂಬಂಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಬುಧವಾರ ಯೋಗಿ ಆದಿತ್ಯನಾಥ ಅವರಿಗೆ ವರದಿ ಸಲ್ಲಿಸಬೇಕಿತ್ತು. ಆದರೆ ಹೊಸ ವಿಚಾರ ಬಹಿರಂಗಗೊಂಡಿರುವ ಹಿನ್ನೆಲೆ ಹೆಚ್ಚಿನ ತನಿಖೆ ನಡೆಸಲು ಎಸ್ಐಟಿಗೆ 10 ದಿನ ಹೆಚ್ಚುವರಿ ಕಾಲವಕಾಶ ನೀಡಲಾಗಿದೆ ಎಂದು ಉನ್ನತ ಅಕಾರಿಯೊಬ್ಬರು ಹೇಳಿದ್ದಾರೆ.