ಬೆಂಗಳೂರಲ್ಲಿ ಕಾಂಗ್ರೆಸ್ ಪ್ರತಿಭಟನೆ; ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ, ಸಿದ್ದರಾಮಯ್ಯ ಗುಡುಗು

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿವೆ. ರೈತರು, ಕಾರ್ಮಿಕರನ್ನು ನಿರ್ಲಕ್ಷಿಸಿದೆ ಎಂಬಿತ್ಯಾದಿ ಆರೋಪಗಳನ್ನು ಮಾಡಿ ರಾಜ್ಯ ಕಾಂಗ್ರೆಸ್ಸಿಗರು ಇವತ್ತು ಪ್ರತಿಭಟನೆ ಮಾಡಿದ್ಧಾರೆ. ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಆಂಜನೇಯ, ಎಂ.ಬಿ. ಪಾಟೀಲ್, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಾರೆ.

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ ಬೋಗಸ್ ಪ್ಯಾಕೇಜ್ ಕೊಟ್ಟಿದೆ. ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ನಾಯಕರು, ಎಂಪಿಎಂಸಿ ಕಾಯ್ದೆ ಹಿಂಪಡೆಯಬೇಕು; ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಬೇಕು; ಗ್ರಾಮ ಪಂಚಾಯಿತಿ ಚುನಾವಣೆ ಆಯೋಜಿಸಬೇಕು ಎಂಬಿತ್ಯಾದಿ ಒತ್ತಾಯಗಳನ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಇವತ್ತಿನ ಪ್ರತಿಭಟನೆ ಅನಿವಾರ್ಯವಾಗಿದ್ದನ್ನು ವಿವರಿಸಿದರು.
ಸರ್ಕಾರದ ಧೋರಣೆಯಿಂದ ಬೇಸತ್ತು ಹೋಗಿದ್ದೇವೆ. ಅನಿವಾರ್ಯವಾಗಿ ಇವತ್ತು ಮಹಾತ್ಮ ಗಾಂಧಿಯವರ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಕಾಗಿ ಬಂತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಬೋಗಸ್ ಪ್ಯಾಕೇಜನ್ನ ಹೊರಡಿಸಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಒಂದು ರೂಪಾಯಿಯನ್ನೂ ರಾಜ್ಯದ ಜನರಿಗೆ ಕೊಟ್ಟಿಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಸಾವಿರ ರೂಪಾಯಿ ಯಾರೊಬ್ಬರಿಗೂ ತಲುಪಿಲ್ಲ. ಕರೆಂಟ್ ಬಿಲ್​ಗಳನ್ನು ಜಾಸ್ತಿ ಮಾಡಿ ಲೂಟಿ ಮಾಡಲಾಗುತ್ತಿದೆ. ಜನರಿಗೆ ಯಾವುದೇ ರೀತಿಯ ಸಹಾಯಕ್ಕೆ ನಿಲ್ಲಲು ಬಿಜೆಪಿ ವಿಫಲ ಆಗಿದೆ. ಕಟ್ಟಡ ಕಾರ್ಮಿಕರ ರಕ್ಷಣೆಗೂ ಸರ್ಕಾರ ನಿಲ್ಲದಿದ್ದರಿಂದ ಅವರೆಲ್ಲಾ ಬೀದಿಪಾಲಾಗುವ ಸ್ಥಿತಿ ಇದೆ. ಅಂಗಡಿ ಮುಚ್ಚಿಸಿ ವ್ಯಾಪಾರ ನಿಲ್ಲಿಸಿ ಈಗ ಬಡ್ಡಿ ಕಟ್ಟಿ ಅಂದ್ರೆ ಸಾಮಾನ್ಯ ಜನರು ಏನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪಂಚಾಯಿತಿ ಚುನಾವಣೆ ಮಾಡಲ್ಲ ಎಂದು ಸರ್ಕಾರ ಹೇಳುತ್ತಿದೆ. ಅವರ ಪಕ್ಷದ ಕಾರ್ಯಕರ್ತರನ್ನೇ ಅಧಿಕಾರಕ್ಕೆ ತರಲು ಹುನ್ನಾರ ನಡೆಯುತ್ತಿದೆ ಎಂದು ಡಿಕೆಶಿ ಶಂಕಿಸಿದರು.ಹೊರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡದೇ ಒಳಗೆ ಬಿಟ್ಟಿರಿ. ಇದರಿಂದ ಸೋಂಕು ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

ಇದಾದ ಬಳಿಕ ಭಾಷಣ ಮಾಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಇನ್ನಷ್ಟು ತೀಕ್ಷ್ಣ ದಾಳಿ ನಡೆಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ