ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲವಾಗಿ ಸಿಲಿಕಾನ್ ಸಿಟಿಯಲ್ಲಿ ಶೀಘ್ರವೇ ಬಿಎಂಟಿಸಿ ಬಸ್ ಓಡಾಟ ಶುರುವಾಗುವ ಸುಳಿವು ಸಿಕ್ಕಿದೆ.
ಹೌದು. 48 ದಿನಗಳ ಲಾಕ್‍ಡೌನ್ ಬಳಿಕ ಇಂದಿನಿಂದ ಬಿಎಂಟಿಸಿಯ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಸೂಚಿಸಿದೆ. ಸಾರಿಗೆ ಸಂಸ್ಥೆಯು ತುರ್ತು ಸೇವೆಗೆ ಒಳಪಡುವುದರಿಂದ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಅಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಆದೇಶ ನೀಡಿದೆ.
ಪ್ರಮುಖ ಸೂಚನೆಯೆಂದರೆ ಕೆಲಸಕ್ಕೆ ಹಾಜರಾಗೋ ಮುನ್ನ ಸಿಬ್ಬಂದಿ ಮೆಡಿಕಲ್ ಸರ್ಟಿಫಿಕೆಟ್ ತರಬೇಕು. ಶಾಂತಿನಗರ ಆಸ್ಪತ್ರೆ ವೈದ್ಯರಿಂದ ತಪಾಸಣೆಗೆ ಒಳಗಾಗಿ ಪರೀಕ್ಷಾ ಪ್ರಮಾಣಪತ್ರ ತರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಶಾಂತಿನಗರ ಆಸ್ಪತ್ರೆಯ ಮುಂಭಾಗದಲ್ಲಿ ಕಂಡಕ್ಟರ್, ಡ್ರೈವರ್ ಗಳು ಸಾಲುಗಟ್ಟಿ ನಿಂತಿದ್ದಾರೆ. ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿರುವುದರಿಂದ ನೌಕರರು ಆರೋಗ್ಯ ತಪಾಸಣೆಗಾಗಿ ಕ್ಯೂ ನಿಂತಿದ್ದಾರೆ.