ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 10 ಸಾವು, 5,000ಕ್ಕೂ ಹೆಚ್ಚು ಜನ ಅಸ್ವಸ್ಥ

ನವದೆಹಲಿ: ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ 10  ಜನ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇಂದು ಮಧ್ಯಾಹ್ನ 11.45ಕ್ಕೆ ವಿಶೇಷ ವಿಮಾನದ ಮೂಲಕ ವಿಶಾಖಪಟ್ಟಣಕ್ಕೆ ತೆರಳಲಿದ್ದಾರೆ.
ವಿಶಾಖಪಟ್ಟಣಂನ ಆರ್​ಆರ್​ ವೆಂಕಟಾಪುರಂ ಎಂಬ ಗ್ರಾಮದ ಬಳಿ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಈ ಅವಘಡ ನಡೆದಿದೆ. ಎಲ್​ಜಿ ಪಾಲಿಮರ್ಸ್ ಇಂಡಸ್ಟ್ರಿ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್​ ಸೋರಿಕೆಯಾದ ಕಾರಣ ಸುತ್ತಮುತ್ತಲಿನ ಮನೆಗಳಿಗೂ ವಿಷಾನಿಲ ಹರಡಿದೆ. ಇದರಿಂದ ಮುಂಜಾನೆ ವಾಕಿಂಗ್​ಗೆ ಹೊರಗೆ ಬಂದಿದ್ದ ಸಾಕಷ್ಟು ಜನರು ಅಸ್ವಸ್ಥರಾಗಿ ರಸ್ತೆಯಲ್ಲೇ ಬಿದ್ದಿದ್ದರು. ಇಬ್ಬರು ಮಕ್ಕಳು ಸೇರಿದಂತೆ 10 ಜನ ಸಾವನ್ನಪ್ಪಿದ್ದಾರೆ.

ಈ ವಿಷ ಅನಿಲ ಸುತ್ತಮುತ್ತಲಿನ 3 ಕಿ.ಮೀ. ದೂರದರೆಗೂ ಹರಡಿರಬಹುದು ಎಂಬ ಅಂದಾಜಿಸಲಾಗಿದೆ. ಘಟನೆ ನಡೆದ ಜಾಗಕ್ಕೆ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ. ವಿನಯ್ ಚಾಂದ್ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಸಾಯನಿಕದಿಂದ ಮೈ, ಕಣ್ಣು ತುರಿಕೆ, ಉರಿಯಿಂದ ಪರದಾಡುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ