ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಎನ್ಕೌಂಟರ್ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಆವಂತಿಪುರದಲ್ಲಿ ಭಾರತೀಯ ಸೇನಾ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಎನ್ಕೌಂಟರ್ ಮಾಡಲಾಗಿದೆ. ಇಲ್ಲಿನ ಶರ್ಸಾಲಿ ಎಂಬ ಗ್ರಾಮದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಮಾಹಿತಿ ಸಿಕ್ಕಿರುವುದರಿಂದ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಸುತ್ತಮುತ್ತಲಿನ 12ರಿಂದ 15 ಮನೆಗಳ ಜನರನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಉಗ್ರನನ್ನು ಸದೆಬಡಿದ ಸ್ಥಳದಲ್ಲಿ ಒಂದು ಎಕೆ-56 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಮುಂಜಾನೆ ವೇಳೆಗೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾಪಡೆ ಕೂಡ ಫೈರಿಂಗ್ ನಡೆಸಿದೆ. ಈ ವೇಳೆ ಉಗ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 2 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಿಂದ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇಲ್ಲಿನ 14 ವರ್ಷದ ನಾಗರಿಕನನ್ನು ಕೂಡ ಉಗ್ರರು ಹತ್ಯೆ ಮಾಡಿದ್ದರು. ಭಾನುವಾರ ಹಂದ್ವಾರದಲ್ಲಿ ಭದ್ರತಾ ಪಡೆಯ ಐವರು ಸಿಬ್ಬಂದಿಯನ್ನು ಉಗ್ರರು ಹತ್ಯೆ ಮಾಡಿದ್ದರು.