ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ಗೆ ಈಗಾಗಲೇ ಓರ್ವ ಸಿಆರ್ಪಿಎಫ್ ಯೋಧ ಬಲಿಯಾಗಿದ್ದಾರೆ. ದೇಶ ಕಾಯುವ ನೂರಾರು ಸೈನಿಕರಿಗೆ ಕೊರೋನಾ ಸೋಂಕು ತಗುಲಿದೆ. ದೆಹಲಿ ಸಿಆರ್ಪಿಎಫ್ ಬೆಟಾಲಿಯನ್ ಒಂದರಲ್ಲೇ 122 ಯೋಧರಿಗೆ ಕೊರೋನಾ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ದೆಹಲಿ ಬೆಟಾಲಿಯನ್ನಲ್ಲಿ ಹೊಸದಾಗಿ 68 ಜನರಿಗೆ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಈ ಬೆಟಾಲಿಯನ್ನಲ್ಲಿ ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಇನ್ನೂ 100ಕ್ಕೂ ಅಧಿಕ ಯೋಧರ ಪರೀಕ್ಷೆಯ ವರದಿ ಹೊರಬೀಳಬೇಕಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ 55 ವರ್ಷದ ಸಿಆರ್ಪಿಎಫ್ ಯೋಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು.
ದೆಹಲಿಯ ಸಿಆರ್ಪಿಎಫ್ ಬೆಟಾಲಿಯನ್ ಒಂದರಲ್ಲೇ ಕೊರೋನಾ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 127 ಸಿಆರ್ಪಿಎಫ್ ಸಿಬ್ಬಂದಿಗೆ ಕೊರೋನಾ ತಗುಲಿದಂತಾಗಿದೆ. ಇದುವರೆಗೂ ಓರ್ವ ಯೋಧ ಸಾವನ್ನಪ್ಪಿದ್ದು, ಓರ್ವ ಸಿಬ್ಬಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಈಗ ಕೊರೋನಾ ಪಾಸಿಟಿವ್ ಬಂದಿರುವ ಯೋಧರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಆ ಯೋಧರೆಲ್ಲರಿಗೂ ರಜೆ ನೀಡಲಾಗಿದ್ದು, 14 ದಿನಗಳ ಕಾಲ ಮನೆಯೊಳಗೇ ಇರುವಂತೆ ಯೋಧರಿಗೆ ಸೂಚನೆ ನೀಡಲಾಗಿದೆ. ರಜೆಯ ಮೇಲೆ ತೆರಳಿದ್ದ ನರ್ಸಿಂಗ್ ಅಸಿಸ್ಟೆಂಟ್ ಇತ್ತೀಚೆಗೆ ಕೆಲಸಕ್ಕೆ ವಾಪಾಸಾಗಿದ್ದರು. ಅವರಿಂದ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಆ ವ್ಯಕ್ತಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ, ಯಾವ ಮೂಲದಿಂದ ಭಾರತೀಯ ಸೇನೆಗೆ ಕೊರೋನಾ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.