ಬೆಂಗಳೂರು: ಕೊರೋನಾ ವೈರಸ್ ಹರಡದಂತೆ ತಡೆಯಲು ಸಾಕಷ್ಟು ರಾಜ್ಯಗಳು ಈಗಾಗಲೇ ಮಾಸ್ಕ್ ಕಡ್ಡಾಯ ಮಾಡಿವೆ. ಈಗ ಇದೇ ನಿಯಮವನ್ನು ಬೆಂಗಳೂರಿಗೆ ತರಲಾಗಿದೆ. ಬೆಂಗಳೂರಲ್ಲಿ ಮಾಸ್ಕ್ ಧರಿಸದೆ ಓಡಾಡಿದರೆ ಇಂದಿನಿಂದ ದಂಡ ಬೀಳಲಿದೆ. ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ.
“ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂಪಾಯಿ ದಂಡ. ಎರಡನೇ ಬಾರಿ ಉಲ್ಲಂಘಿಸಿದರೆ 2 ಸಾವಿರ ರೂಪಾಯಿ ದಂಡ. ಪದೇ ಪದೇ ಉಲ್ಲಂಘಿಸಿದರೆ ಶಿಕ್ಷೆ ವಿಧಿಸಲು ಚಿಂತನೆ ನಡೆಸಲಾಗಿದೆ,” ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
“ಈಗಾಗಲೇ ದಂಡ ವಿಧಿಸುವ ಹೊಣೆಗಾರಿಕೆ ಮಾರ್ಷಲ್ಗಳಿಗೆ ವಿಧಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಅವರು ತಿಳಿಸಿದರು.
ಕೊರೋನಾ ಸೋಂಕಿತ ವ್ಯಕ್ತಿ ಸೀನಿದಾಗ ವೈರಸ್ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಮಾಸ್ಕ್ ಧರಿಸಿದರೆ ಒಂದೊಮ್ಮೆ ಕೊರೋನಾ ವೈರಸ್ ಅಂಟಿರುವ ವ್ಯಕ್ತಿ ಸೀನಿದರೂ ವೈರಸ್ ವಾತಾವರಣ ಸೇರುವ ಸಾಧ್ಯತೆ ತುಂಬಾನೇ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಈ ರೀತಿಯ ನಿಯಮ ಜಾರಿಗೆ ತರಲಾಗಿದೆ.