ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ: 15 ಜನರ ಬಂಧನ

ಕಲಬುರಗಿ: ಲಾಕ್‍ಡೌನ್ ನಿಯಮ ಮೀರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದವರಿಗೆ ಕಲಬುರಗಿಯ ಪೊಲೀಸರು ಬಿಸಿಮುಟ್ಟಿಸಿದ್ದಾರೆ.

ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಸೀದಿಯಲ್ಲಿ ಸುಮಾರು 15 ಜನರು ನಮಾಜ್ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ರುಚಿ ತೋರಿಸಿ, ಎಲ್ಲ 15 ಮಂದಿಯನ್ನೂ ಬಂಧಿಸಿದ್ದಾರೆ.

ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 44 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 7 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 32 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.

ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ