ಅಹಮದಾಬಾದ್: ಮೊದಲ ಬಾರಿಗೆ ದೇಶದಲ್ಲಿ ಕೊರೊನಾಗೆ ರಾಜಕೀಯ ನಾಯಕರೊಬ್ಬರು ಬಲಿಯಾಗಿದ್ದಾರೆ. ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ 67 ವರ್ಷದ ಬದ್ರುದ್ದೀನ್ ಶೇಖ್ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ.
ಏಪ್ರಿಲ್ 15 ರಂದು ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಅಹಮದಾದಬಾದಿನ ಎಸ್‍ವಿಪಿ ಆಸ್ಪತ್ರೆಗೆ ದಾಖಲಾಗಿದ್ದರು. 11 ದಿನಗಳ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಬದ್ರುದ್ದೀನ್ ಶೇಖ್ ಅವರು ಬಡವರಿಗೆ ಆಹಾರ ವಿತರಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಶೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬದ್ರುಬಾಯ್ ಅವರ 40 ವರ್ಷಗಳಿಂದ ಪರಿಚಿತರು. ಯೂತ್ ಕಾಂಗ್ರೆಸ್ ನಿಂದ ಅವರು ಮೇಲೆ ಬಂದಿದ್ದರು ಎಂದು ಹೇಳಿ ಕಂಬನಿ ಮಿಡಿದಿದ್ದಾರೆ.
ಅಹಮದಾಬಾದ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಇವರು, ಗುಜರಾತಿನ ಕಾಂಗ್ರೆಸ್ಸಿನ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.