ಬೆಂಗಳೂರು: ಸಿಎಂ ಯಡಿಯೂರಪ್ಪ ಏಪ್ರಿಲ್ 20ರಿಂದ ಅಂದರೆ ಇಂದಿನಿಂದ ಐಟಿ-ಬಿಟಿ ಕಂಪನಿ ಓಪನ್ ಆಗುತ್ತವೆ ಎಂದು ಹೇಳಿದ್ದರು. ಆದರೆ ಇದೀಗ ಕ್ಯಾಬಿನೆಟ್ ಸಭೆಯಲ್ಲಿ ಐಟಿ-ಬಿಟಿ ಕಂಪನಿ ಓಪನ್ ಇಲ್ಲ ಎಂದು ಸಚಿವ ಮಾಧುಸ್ವಾಮಿ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೇ 3ರ ತನಕ ಲಾಕ್ಡೌನ್ ಇರುತ್ತದೆ. ಹೀಗಾಗಿ ಯಾವುದೇ ರಿಯಾಯಿತಿ ಇರಲ್ಲ. ರಾಜ್ಯವೇ ಫುಲ್ ಲಾಕ್ಡೌನ್ ಆಗುತ್ತದೆ. ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರಿವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಆದ್ದರಿಂದ ರಾಜ್ಯದಲ್ಲಿ ನಾಳೆಯಿಂದ ಫುಲ್ ಟಫ್ ರೂಲ್ಸ್ ಜಾರಿಯಾಗಲಿದೆ. ಲಾಕ್ಡೌನ್ನನ್ನು ಮೇ.3ರ ತನಕ ಮುಂದುವರಿಸಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದರು.
ಈಗಿರುವ ಲಾಕ್ಡೌನ್ ಮುಂದುವರಿಯುತ್ತೆ. ಯಾವುದೇ ಬದಲಾವಣೆ ಇಲ್ಲ. ಎರಡು-ಮೂರು ದಿನದಲ್ಲಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದರೆ ಆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ, ಬಿಟಿ ಕಂಪನಿ ಮತ್ತು ಕಾರ್ಖಾನೆ ಎಲ್ಲವೂ ಬಂದ್ ಆಗಲಿದೆ. ಹೀಗಾಗಿ ಲಾಕ್ಡೌನ್ ಯಥಾಸ್ಥಿತಿ ಮುಂದುವರಿಯುತ್ತೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಇದೇ ವೇಳೆ ಪಾದರಾಯನಪುರದ ಗಲಾಟೆಯ ಬಗ್ಗೆ ಮಾತನಾಡಿ, ಪಾದರಾಯನಪುರ ಗಲಾಟೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಕೇರಳ ಮತ್ತು ಉತ್ತರಪ್ರದೇಶ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನೇ ಜಾರಿ ಮಾಡುತ್ತೇವೆ. ಯಾರಾದರೂ ಪಾಲನೆ ಮಾಡಲಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೊರೊನಾವನ್ನು ಹತೋಟಿಗೆ ತರಲೇಬೇಕು ಅನ್ನೋ ತೀರ್ಮಾನವನ್ನ ಸರ್ಕಾರ ಮಾಡಿದೆ. ಹೀಗಾಗಿ ಕೊರೊನಾ ವಾರಿಯರ್ಸ್ ಗೆ ರಕ್ಷಣೆ ಕೊಡುತ್ತೇವೆ. ಅದೇ ರೀತಿ ಅವರಿಗೆ ತೊಂದರೆ ಕೊಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧುಸ್ವಾಮಿ ಎಚ್ಚರಿಕೆ ನೀಡಿದರು.
ಸರ್ಕಾರ 21ರ ತನಕ ಹಿಂದಿನ ನಿಯಮ ಮುಂದುವರಿಯುತ್ತೆ ಅಂತ ಆದೇಶ ಮಾಡಿದ್ದು, 21ರ ನಂತರ ಸಡಿಲ ಆಗುತ್ತೆ ಅಂತ ಆದೇಶ ಮಾಡಿಲ್ಲ. ಹಾಗಾಗಿ ಇಂದಿನ ಕ್ಯಾಬಿನೆಟ್ ತೀರ್ಮಾನದಂತೆ ಮೇ 3ರ ತನಕ ಲಾಕ್ಡೌನ್ ಮುಂದುವರಿಯುತ್ತೆ ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿದರು.