ನವದೆಹಲಿ; ಕೊರೋನಾ ಭೀತಿಯಿಂದಾಗಿ ಇಡೀ ವಿಶ್ವದ ಜಿಡಿಪಿ ಕುಸಿತವಾಗಿದ್ದು 9 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿದೆ. ಈ ನಡುವೆ ಭಾರತದ ಅಭಿವೃದ್ಧಿ ದರವೂ ಕುಸಿದಿದ್ದು ಮುಂದಿನ ದಿನಗಳಲ್ಲಿ ಶೇ. 1.9 ರಷ್ಟು ಅಭಿವೃದ್ಧಿ ದರವನ್ನು ನಿರೀಕ್ಷಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಕೊರೋನಾದಿಂದಾಗಿ ವಿಶ್ವದ ಉತ್ಪಾದನೆಯ ಜೊತೆಗೆ ಭಾರತದ ಉತ್ಪಾದನಾ ವಲಯವೂ ಸಾಕಷ್ಟು ಕುಸಿತ ಅನುಭವಿಸಿದೆ. ಹೀಗಾಗಿ ಭಾರತದ ಜಿಡಿಪಿ ಸಾಕಷ್ಟು ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಯ ಪುನಶ್ಛೇತನಕ್ಕಾಗಿ ಆರ್ಬಿಐ ಹತ್ತಾರು ಘೋಷಣೆಗಳನ್ನು ನೀಡಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಇಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಕ್ತಿಕಾಂತ್ ದಾಸ್, “1930ರ ನಂತರ ಇಡೀ ವಿಶ್ವ ಇಂತಹ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಶ್ವದ 9ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟು ಆರ್ಥಿಕತೆ ನಷ್ಟವಾಗಿದೆ. ಭಾರತದ ಜಿಡಿಪಿ ಸಹ ಶೇ.1.9 ಕ್ಕೆ ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರಲು ಆರ್ಬಿಐ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. 2021-22ರ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ7.4ಕ್ಕೆ ಏರುವ ನಿರೀಕ್ಷೆ ಇದೆ” ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ, “ಭಾರತದ ಉತ್ಪಾದನಾ ವಲಯದ ಜೊತೆಗೆ ಉದ್ಯೋಗ ವಲಯವೂ ಸಾಕಷ್ಟು ನಷ್ಟ ಅನುಭವಿಸಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದಲ್ಲಿ ಶೇ.21.3 ರಷ್ಟು ಅಧಿಕ ಟ್ಯ್ರಾಕ್ಟರ್ ಮಾರಾಟವಾಗಿದೆ. ಅಲ್ಲದೆ, ಆರ್ಬಿಐ ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದ್ದು, ಶೇ.4 ರಿಂದ ಶೇ 3.75ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇನ್ನೂ ಬ್ಯಾಂಕ್ಗಳಿಗೆ ಹಾಗೂ ಎಟಿಎಂಗಳಿಗೆ ಜಿಡಿಪಿ ದರದ ಶೇ.3.2 ರಷ್ಟು ಹಣದ ಹರಿವನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಎಲ್ಲೂ ಹಣದ ಕೊರತೆ ಉಂಟಾಗಿಲ್ಲ” ಎಂದು ತಿಳಿಸಿದ್ದಾರೆ.
ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಬಿಐ ಪ್ರಮುಖ ಘೋಷಣೆಗಳು:
1. ಸಮರ್ಪಕ ಹಣದ ಹರಿವಿನ ನಿರ್ವಹಣೆ.
2.ಬ್ಯಾಂಕುಗಳಿಗೆ ಹಣದ ಕೊರತೆಯಾಗದಂತೆ ಎಚ್ಚರಿಕೆ ಹಾಗೂ ಎಲ್ಲಾ ಬ್ಯಾಂಕುಗಳಿಗೆ ಜಿಡಿಪಿ ಶೇ.3.2 ರಷ್ಟು ಹಣದ ಪೂರೈಕೆ.
3. ಶೇ.91 ರಷ್ಟು ಎಟಿಎಂ ಗಳ ಕಾರ್ಯ ನಿರ್ವಹಣೆ.
4. ಆಹಾರಧಾನ್ಯಗಳಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳುವುದು.
5. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 50,000 ಕೋಟಿ ಮೀಸಲು
6.ನಬಾರ್ಡ್ಗೆ (NABARD) 25,000 ಸಾವಿರ ಕೋಟಿ.
7. ಸಣ್ಣ ಕೈಗಾರಿಕೆ ಅಭಿವರದ್ಧಿ ನಿಗಮ ಕ್ಕೆ (SIDBI) ಹೆಚ್ಚುವರಿ 15,000 ಕೋಟಿ.
8. ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದು ಈ ಮೂಲಕ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ.
9. ಆರ್ಬಿಐ ಬಳಿ ಸಾಕಷ್ಟು ವಿದೇಶಿ ಕರೆನ್ಸಿ ಇದೆ.
10. ಮೂರು ತಿಂಗಳ ಕಾಲ ಪಿಎನ್ಎ ನಿಯಮ (ಪಡೆದಿರುವ ಸಾಲ ಮರುಪಾವತಿ) ಅನ್ವಯಿಸುವುದಿಲ್ಲ.