ಬೆಂಗಳೂರು: ಕೊರೋನಾ ಸೋಂಕು ಭಯಾನಕವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಅನ್ನು ನಾವೂ ಬೆಂಬಲಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ನಿರೀಕ್ಷಿತ ಫಲ ಸಿಗಲಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ಮೋದಿ ಅವರು ಪರಿಹಾರ ಒದಗಿಸುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದರು.
ಇತ್ತ ರಾಜ್ಯ ಸರ್ಕಾರವೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವು ದರಿಂದ ಆರ್ಥಿಕವಾಗಿ ದಿವಾಳಿಯಾಗಿದೆ. ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಹೋಗಿದೆ. ಇಂತಹ ಸ್ಥಿತಿ ಕಳೆದ 30 ವರ್ಷದಲ್ಲಿ ದೇಶ ಎಂದೂ ಕಂಡಿರಲಿಲ್ಲ.
ದೇಶದ ಆರ್ಥಿಕ ಬೆಳವಣಿಗೆ 2.5 ಆಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ಇದು 30 ವರ್ಷದಲ್ಲಿ ಕನಿಷ್ಟ ಬೆಳವಣಿಗೆ. ಹೀಗಾಗಿ ಜನತೆ ಪ್ರಧಾನಿಯವರ ಕಡೆಗೆ ನಿರೀಕ್ಷೆಯ ನೋಟ ನೆಟ್ಟಿದ್ದರು. ಆದರೆ, ಜನರ ಭರವಸೆ ಹುಸಿಯಾಗಿದೆ. ಯಾವುದೇ ನೆರವನ್ನು ಘೋಷಿಸದ ಮೋದಿಯವರು ಏಳು ಸೂತ್ರವನ್ನು ಹೇಳಿ ಕೈ ತೊಳೆದುಕೊಂಡಿದ್ದಾರೆ. ಜನರನ್ನು ಕಷ್ಟದ ಕಡಲಲ್ಲಿಯೇ ತೇಲಲು ಬಿಟ್ಟಿದ್ದಾರೆ ಎಂದರು.
ಲಾಕ್ಡೌನ್ ನಿಂದ ಕೈಗಾರಿಕೆಗಳು ಮುಚ್ಚಿವೆ. ಕೃಷಿ ಕ್ಷೇತ್ರ ಬಡವಾಗಿದೆ. ಕಾರ್ಮಿಕರು ಕಂಗಾಲಾಗಿದ್ದಾರೆ. ಹಳ್ಳಿ ಜನರ ತೊಂದರೆ ಹೇಳತೀರದಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಅವರು ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡ ಬೇಕಿತ್ತು. ಬಡವರು, ಕಾರ್ಮಿಕರಿಗೆ ಜೀವನದ ಭದ್ರತೆ ಒದಗಿಸಬೇಕಿತ್ತು. ಕೋಟ್ಯಂತರ ಮಂದಿ ವಲಸಿಗ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಇದುವರೆಗೂ ಅವರನ್ನು ಮುಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮೋದಿಯವರು ದೇಶವನ್ನು ಉದ್ದೇಶಿಸಿ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಜರಿದರು.
ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ
ನಾವು ಲಾಕ್ಡೌನ್ ವಿಸ್ತರಣೆಗೆ ವಿರೋಧ ಮಾಡುವುದಿಲ್ಲ. ಕೊರೋನಾ ಸೋಂಕು ಭಯಾನಕವಾಗಿದೆ. ಅದರ ಪ್ರಮಾಣ ಇನ್ನೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಲಾಕ್ಡೌನ್ಗೆ ಜನರೂ ಬೆಂಬಲಿಸಬೇಕು. ನೊಂದವರ ನೆರವಿಗೆ ಸರ್ಕಾರ ಬರಬೇಕು.