ನವ ದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಏಪ್ರಿಲ್.15 ರಿಂದ ಕೇಂದ್ರ ಸರ್ಕಾರ ಎರಡನೇ ಹಂತದ ಲಾಕ್ಡೌನ್ ಘೋಷಿಸಿದ್ದು, ಈ ಲಾಕ್ಡೌನ್ ಹೇಗಿರಲಿದೆ? ಜನ ಏನು ಮಾಡಬೇಕು? ಏನು ಮಾಡಬಾರದು? ಯಾವುದು ಲಭ್ಯ? ಯಾವುದು ಅಲಭ್ಯ? ಎಂಬ ಕುರಿತ ಸಂಪೂರ್ಣ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಈ ಮೊದಲು ಸರ್ಕಾರ ಏಪ್ರಿಲ್.14 ರವರೆಗೆ ಮಾತ್ರ 21 ದಿನಗಳ ಲಾಕ್ಡೌನ್ ಘೋಷಿಸಿತ್ತು. ಆದರೆ, ಈ ಅವಧಿಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರದ ಕಾರಣ ಇಂದಿನಿಂದ 19 ದಿನಗಳ ಮತ್ತೊಂದು ಅವಧಿಯ ಲಾಕ್ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು? ಅವರಿಗೆ ಏನೆಲ್ಲ ಲಭ್ಯ? ಏನೆಲ್ಲಾ ನಿಷೇಧ ಎಂಬ ಕುರಿತ ಸಂಪೂರ್ಣ ವಿವರವನ್ನು ಈ ಮಾರ್ಗಸೂಚಿ ಹೊಂದಿದೆ. ಅಲ್ಲದೆ, ಎಲ್ಲರೂ ಚಾಚೂ ತಪ್ಪದೆ ಪಾಲಿಸಲು ಸೂಚಿಸಲಾಗಿದೆ.
ಈ ಮಾರ್ಗಸೂಚಿಯಲ್ಲಿ ಎರಡನೇ ಹಂತದ ಲಾಕ್ಡೌನ್ ಅವಧಿಯಲ್ಲಿ ಕೃಷಿ, ಕೈಗಾರಿಕೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಸಡಿಲಿಸಲಾಗಿದ್ದು, ಕೆಲಸಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಲಾಕ್ಡೌನ್ ಅವಧಿಯಲ್ಲಿ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.
ಏನೆಲ್ಲಾ ಇರುವುದಿಲ್ಲ?
#ಲಾಕ್ಡೌನ್ ನಿಂದಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಮಾನಗಳು, ಎಲ್ಲಾ ರೀತಿಯ ರೈಲು ಸೇವೆಗಳು ಮತ್ತು ಬಸ್ ಸಂಚಾರ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು ಮೇ 03ರ ವರೆಗೆ ಇದು ಮುಂದುವರೆಯುತ್ತದೆ.
#ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸ್ಥಗಿತ.
#ಧಾರ್ಮಿಕ ಕ್ಷೇತ್ರಗಳ ಸ್ಥಗಿತ ಮುಂದುವರೆಯಲಿದೆ.#ಹಾಟ್ಸ್ಪಾಟ್ ಎಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ.
#ಎಲ್ಲಾ ರೀತಿಯ ಸಾರ್ವಜನಿಕ ಸಮಾರಭಗಳಿಗೂ ತಡೆ.
#ಚಿತ್ರ ಮಂದಿರಗಳು, ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಈಜುಕೊಳ ಸೇರಿದಂತೆ ಎಲ್ಲಾ ಕ್ರೀಡಾ ಮತ್ತು ಮನರಂಜನಾ ಕ್ಷೇತ್ರಗಳು ತೆರೆಯಲಾಗುವುದಿಲ್ಲ.
# ಈ ಅವಧಿಯಲ್ಲಿ ಎಲ್ಲೇ ಯಾರೇ ಮೃತರಾದರೂ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
ಏನೆಲ್ಲಾ ಇರಲಿದೆ?
#ಎಲ್ಲಾ ಆಸ್ಪತ್ರೆಗಳು ತೆರೆದಿರಲಿವೆ. ಎಲ್ಲಾ ರೀತಿಯ ರೋಗಿಗಳಿಗೂ ಸೂಕ್ತ ಚಿಕಿತ್ಸೆ.
#ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ಎಲ್ಲವೂ ತೆರೆದಿರಲಿವೆ.
#ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಲು ಅನುವು ಮಾಡಿಕೊಡಲಾಗಿದೆ.
#ರೈತರಿಗೆ ಪೂರಕವಾಗಿ ಗೊಬ್ಬರು, ಬೀಜ ಮತ್ತು ಕೃಷಿ ಸಲಕರಣೆಗಳನ್ನು ಮಾರಾಟ ಮಾಡುವ ಕಂಪೆನಿಗಳು ಕಾರ್ಯ ಆರಂಭಿಸಲು ಅವಕಾಶ ನೀಡಲಾಗಿದೆ.
#ಆಹಾರದ ಸರಪಳಿ ತುಂಡರಿಯದೆ ನೋಡಿಕೊಳ್ಳುವ ಸಲುವಾಗಿ ರೈತರಿಂದ ಪದಾರ್ಥಗಳನ್ನು ಕೊಂಡು ಮಾರುಕಟ್ಟೆಗೆ ಸಾಗಿಸುವ ಎಲ್ಲಾ ಮಾದರಿಯ ಸಂಪರ್ಕಕ್ಕೂ ಕೇಂದ್ರ ನಿಶಾನೆ ನೀಡಿದೆ.
#ಗ್ರಾಮೀಣ ಭಾಗದಲ್ಲಿ ಎಂಎನ್ಆರ್ಇಜಿಎ (MNREGA) ಕೆಲಸಗಳಿಗೆ ಅನುಮತಿ. ಈ ಮೂಲಕ ಕೃಷಿ ಕೂಲಿಗಳಿಗೆ ಕೆಲಸ ನೀಡಬಹುದು.
#ಅಡಿಗೆ ಅನಿಲ ಪೂರೈಕೆ, ನೀರು ಸರಬರಾಜು ಹಾಗೂ ಶುಚಿ ಕೆಲಸದಲ್ಲಿ ತೊಡಗಿರುವವರಿಗೆ ಯಾವುದೇ ತೊಂದರೆ ಇಲ್ಲ.
#ಗೂಡ್ಸ್ ರೈಲು ಎಂದಿನಂತೆ ಕಾರ್ಯನಿರ್ವಹಿಸಲಿದೆ.
#ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
#IT ಉದ್ಯಮ ಶೇ.50 ರಷ್ಟು ಉದ್ಯೋಗಿಗಳ ಜೊತೆಗೆ ಕಚೇರಿಯಲ್ಲಿ ಎಂದಿನಂತೆ ಕಾರ್ಯಾರಂಭ ಮಾಡಲು ಅನುಮತಿ.
#ಗ್ರಾಮ ಪಂಚಾಯತಿ ಮಟ್ಟದ ಸರ್ಕಾರಿ ಕಚೇರಿಗಳನ್ನು ತೆರೆಯಲಾಗುವುದು.
#ವಿಶೇಷ ಆರ್ಥಿಕ ವಲಯದ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆಗಳು ಹಾಗೂ ಆಹಾರ ಸಂರಕ್ಷಣಾ ಘಟಕಗಳು ಎಂದಿನಂತೆ ಕಾರ್ಯಾರಂಭ ಮಾಡಬಹುದು. ಆದರೆ, ಉದ್ಯೋಗಿಗಳನ್ನು ಸಾಮಾಜಿಕ ಅಂತರದ ನಿಮಯಮಗಳಿಗೆ ಅನುಸಾರವಾಗಿ ಕೈಗಾರಿಕೆಗಳಿಗೆ ಕರೆತರಬೇಕು. ಉತ್ತಮ ಸಾರಿಗೆ ವ್ಯವಸ್ಥೆ ನೀಡಬೇಕು.
#ರಸ್ತೆ, ನೀರಾವರಿ, ಕಟ್ಟಡ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೂ ಹಸಿರು ನಿಶಾನೆ.
#ಆರೋಗ್ಯ ಸೇವೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಗಳ ಓಡಾಡಕ್ಕೆ ಅವಕಾಶ.
#ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಎಂದಿನಂತೆ ಕಾರ್ಯನಿರ್ವಹಿಸಲಿವೆ.
#ರಾಜ್ಯ ಸರ್ಕಾರದ ಪೊಲೀಸ್ ಇಲಾಕೆ, ಗೃಹ ರಕ್ಷಕ ದಳ, ಜಿಲ್ಲಾಡಳಿತ, ಖಜಾನೆ ಇಲಾಖೆಗಳು ಕಾರ್ಯ ನಿರ್ವಹಿಸುತ್ತವೆ.
ಈ ಮೇಲಿನ ಎಲ್ಲವೂ ಮುಂದಿನ 19 ದಿನಗಳ ಅವಧಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು? ಏನು ಮಾಡುವಂತಿಲ್ಲ? ಮತ್ತು ಏನೆಲ್ಲಾ ಲಭ್ಯ-ಅಲಭ್ಯ? ಎಂಬ ಕುರಿತು ಮಾಹಿತಿಯಾಗಿದೆ. ಒಂದು ವೇಳೆ ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಮೀರಿ ನಡೆದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.