ಬೆಂಗಳೂರು: ರಾಜ್ಯದಲ್ಲಿ ಏ.15 ರ ಬುಧವಾರದಿಂದ 2ನೇ ಹಂತದ ಲಾಕ್ಡೌನ್ ಘೋಷಣೆ ಯಾಗಲಿದ್ದು, ಕೆಲವೆಡೆ ಲಾಕ್ಡೌನ್ ಕೊಂಚ ಸಡಿಲಗೊಂಡರೆ, ಮತ್ತೆ ಕೆಲವೆಡೆ ಇನ್ನಷ್ಟು ಬಿಗಿಯಾಗಲಿದೆ. ಒಟ್ಟಾರೆ ತಿಂಗಳಾಂತ್ಯದವರೆಗೂ ಷರತ್ತುಬದ್ಧ ಲಾಕ್ಡೌನ್ ಮುಂದುವರಿಯಲಿದೆ.
ಈ ಕುರಿತು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಂಪುಟ ಸಹೋದ್ಯೋಗಿಗಳು ಹಾಗೂ ಅಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೆಲ ಕ್ರಮಗಳನ್ನು ಜಾರಿಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ಲಾಕ್ಡೌನ್ ಸಡಿಲಗೊಳಿಸುವ ಸಾಧ್ಯತೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಪ್ರಧಾನ ಮಂತ್ರಿಯವರು ನೀಡುವ ಸೂಚನೆಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಗಲೇಬೇಕಿದೆ, ಆರ್ಥಿಕ ಸ್ಥಿತಿ ಸುಧಾರಣೆ
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳು ಬಂದವು. ಅವುಗಳನ್ನು ನಾವು ಜಾರಿಗೊಳಿಸಲು ತೀರ್ಮಾನಿಸಲಾಯಿತು. ಉಳಿದಂತೆ ಕೋವಿಡ್-19 ರಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತವಾಗಿದೆ. ಇದನ್ನು ಸರಿದೂಗಿಸಲು ಹಲವು ಮಾರ್ಗೋಪಾಯಗಳನ್ನು ಕಂಡು ಹಿಡಿಯುವಂತೆ ಅಕಾರಿಗಳಿಗೆ ಸೂಚಿಸಲಾಗಿದೆ.
ಸಂಪನ್ಮೂಲ ಕ್ರೊಢೀಕರಣಕ್ಕೆ ಕ್ರಮ
ಅನಕೃತ ಕಟ್ಟಡಗಳ ಕುರಿತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರಯತ್ನಿಸುವಂತೆ ಸೂಚಿಸಲಾಯಿತು.
ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥವಾದರೆ ನಾಗರಿಕರಿಗೂ ಅನುಕೂಲವಾಗಲಿದೆ. ರಾಜ್ಯಕ್ಕೂ ಸಂಪನ್ಮೂಲ ದೊರೆಯಲಿದೆ.
ಇನ್ನು ಪ್ರಸ್ತುತ ಕೋವಿಡ್ 19ಕ್ಕೆ ಸಂಬಂಸಿದಂತೆ ವಿವಿಧ ಇಲಾಖೆಗಳಡಿ ಪೋರ್ಟಲ್ಗಳನ್ನು ನಿರ್ವಹಿಸಲಾಗುತ್ತಿದ್ದು, ಇವುಗಳನ್ನು ಏಕೀಕೃತ ಪೋರ್ಟಲ್ ವ್ಯವಸ್ಥೆಯಡಿ ತರಲು ತೀರ್ಮಾನಿಸಲಾಯಿತು.
ಮೂಲೆ ನಿವೇಶನಗಳ ಹರಾಜು
ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಾಭಿವೃದ್ಧಿ ಪ್ರಾಕಾರಗಳಲ್ಲಿ ಮೂಲೆ ನಿವೇಶನಗಳು ಹಾಗೂ ಖಾಲಿ ಇರುವ ನಿವೇಶನಗಳನ್ನು ಹರಾಜು ಹಾಕಲು ಕ್ರಮ ವಹಿಸಲಾಗುವುದು.
ಅಲ್ಲದೆ, ಖಾಸಗಿ ಮತ್ತು ಸಹಕಾರಿ ಸಂಘಗಳ ಬಡಾವಣೆ ನಿರ್ಮಾಣ ಹಾಗೂ ನಿವೇಶನಕ್ಕೆ ಸಂಬಂಸಿದಂತೆ ಕಾನೂನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅನುಮತಿಗೆ ಕಾಯುತ್ತಿರುವ ನೂರಾರು ವಸತಿ ನಿರ್ಮಾಣ ಸೊಸೈಟಿಗಳಿಗೆ ಅನುಮತಿ ನೀಡಲು ಸಾಧ್ಯವಾಗುವುದು ಎಂದು ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದರು.
ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳು
* ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ 1000 ಕೋಟಿ ರೂ.ಗಳನ್ನು ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಲಾಯಿತು.
* ಮುಂದಿನ ಒಂದು ವಾರಕ್ಕೆ ಉಚಿತ ಹಾಲು ವಿತರಣೆ ವಿಸ್ತರಿಸಲಾಗುವುದು.
* ರಾಜ್ಯದ 11 ಜಿಲ್ಲೆಗಳಲ್ಲಿ 2834 ಕೋಟಿ ರೂ. ಬಾಕಿ ಹಣವನ್ನು ರೈತರಿಗೆ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದರು.
* ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಭತ್ತ ಬೆಳೆ ನಾಶವಾಗಿರುವ ಕುರಿತು ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ ವಿತರಣೆಗಾಗಿ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.