ಮಂಡ್ಯ: ಮಳವಳ್ಳಿಯಲ್ಲಿ ತಬ್ಲಿಘಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದಂತಹ ಇನ್ನೂ ಮೂವರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಮಳವಳ್ಳಿಯ 7 ಮಂದಿಯ ಪೈಕಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಪಿ.179ರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರ ತಾಯಿ ಪಿ.236, ಹೆಣ್ಣು ಮಗು ಪಿ.238 ಹಾಗೂ ಆತನ ಅಕ್ಕನ ಮಗ ಪಿ.239 ಎಂದು ಗುರುತಿಸಲಾಗಿದ್ದು, ಎಲ್ಲರೂ ಮಳವಳ್ಳಿಯ 2ನೇ ವಾರ್ಡಿನ ಪೇಟೆ ಬೀದಿಯ ನಿವಾಸಿಗಳಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.4ರಂದೇ ಜಿಲ್ಲಾಡಳಿತ ಸೋಂಕಿತರನ್ನು ಗುರುತಿಸಿ ಐಸೋಲೇಷನ್ ಮಾಡಲಾಗಿತ್ತು. ಸೋಂಕು ದೃಢಪಟ್ಟ ನಂತರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ (ಮಿಮ್ಸ್)ನ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ತಾಯಿ, ಮಗಳು ಮತ್ತು ಅಕ್ಕನ ಮಗನನ್ನೂ ಹೋಂ ಕ್ವಾರಂಟೈನ್ ಮಾಡಲಾಗಿತ್ತು. 14 ದಿನಗಳ ಬಳಿಕ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಎಲ್ಲ ಮೂರು ಮಂದಿಯನ್ನೂ ಜಿಲ್ಲಾಡಳಿತ ವಶಕ್ಕೆ ಪಡೆದು ಮಿಮ್ಸ್ನ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಕೊರೋನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಂಕಿತರ ಪೈಕಿ ಪಿ.239 18 ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಇವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 20 ಜನರನ್ನೂ ಗುರುತಿಸಿದ್ದು, ಅವರೆಲ್ಲರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಎಲ್ಲರೂ ಮಳವಳ್ಳಿ ಬಿಟ್ಟು ಬೇರೆ ಕಡೆ ಎಲ್ಲೂ ಹೋಗಿರುವುದಿಲ್ಲ ಎಂದರು.
ಸೋಂಕು ದೃಢಪಟ್ಟಿರುವ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆ ನೌಕರ, ಸ್ವರ್ಣಸಂದ್ರದ ನಿವಾಸಿಯನ್ನೂ ಮಿಮ್ಸ್ನ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರ ತಂದೆ, ತಾಯಿ, ತಂಗಿ, ತಂಗಿಯ ಮಗಳಿಗೆ ಯಾವುದೇ ಸೋಂಕು ತಗುಲಿಲ್ಲ. ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.