ಬೆಂಗಳೂರು: ದೇಶವ್ಯಾಪಿ ಕೊರೋನಾ ಸೋಂಕಿನ ಪರಿಸ್ಥಿತಿ ಹಾಗು ಅದನ್ನು ನಿಭಾಯಿಸಲು ಕೈಗೊಳ್ಳಲಾಗಿರುವ ಕ್ರಮಗಳನ್ನು ಅವಲೋಕಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ್ದಾರೆ. ರಾಜ್ಯ ಸಿಎಂ ಯಡಿಯೂರಪ್ಪ ಕೂಡ ಈ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಏಪ್ರಿಲ್ 14ರ ನಂತರವೂ ಲಾಕ್ ಡೌನ್ ವಿಸ್ತರಿಸುವ ಕುರಿತು ಈ ಸಂದರ್ಭದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಮಾಸ್ಕ್ ಧರಿಸಿಕೊಂಡೇ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಗಮನಾರ್ಹದ ಸಂಗತಿ ಎಂದರೆ ಪ್ರಧಾನಿಗಳು ಮನೆಯಲ್ಲೇ ಮಾಡಿದ ಮಾಸ್ಕ್ ಅನ್ನು ಧರಿಸಿದ್ದರು. ಈ ಮೂಲಕ ಜನರಿಗೂ ಮಾಸ್ಕ್ ಕುರಿತು ಜಾಗೃತಿ ಸಂದೇಶ ಮೂಡಿಸಿದ್ಧಾರೆ.
ಮೋದಿ ಜೊತೆಗಿನ ವಿಡಿಯೋ ಸಂವಾದದಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನದವರೆಗೂ ಈ ವಿಸಿ ಮುಂದುವರಿಯುವ ಸಾಧ್ಯತೆ ಇದೆ.
ಪಿಎಂ ಜೊತೆಗಿನ ಈ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರಿದ್ಧಾರೆ.
ಈ ಸಂವಾದಕ್ಕೆ ಮುನ್ನ ಪೂರ್ವತಯಾರಿಯಾಗಿ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಿ ಸಮಾಲೋಚನೆ ಮಾಡಿದರು. ಶ್ರೀರಾಮುಲು, ಬೊಮ್ಮಾಯಿ, ಸುಧಾಕರ್, ಸುರೇಶ್ ಕುಮಾರ್ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.