ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಚೀನಾಕ್ಕೆ ಛೀಮಾರಿ ಹಾಕಿದ ಭಾರತ

ನವದೆಹಲಿವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿ ಕಾಶ್ಮೀರ ಉನ್ನತ ಸ್ಥಾನದಲ್ಲಿದೆ ಎಂಬ ಚೀನಾ ಹೇಳಿಕೆಗೆ ಛೀಮಾರಿ ಹಾಕಿರುವ ಭಾರತ ಚೀನಾ ಹೇಳಿಕೆಯನ್ನು ತಿರಸ್ಕರಿಸಿದ್ದು ಜಮ್ಮು ಮತ್ತು ಕಾಶ್ಮೀರದ ವಿಷಯ ಭಾರತದ ಆಂತರಿಕ ವಿಷಯ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ.

ನ್ಯೂಯಾರ್ಕ್‌ನಲ್ಲಿರುವ ಎಂಇಎ ತನ್ನ ಶಾಶ್ವತ ಕಾರ್ಯಾಚರಣೆಯ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಶಾಶ್ವತ ಮಿಷನ್ ವಕ್ತಾರರು ವಿಶ್ವಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾಡಲಾದ ಉಲ್ಲೇಖವನ್ನು ತಿರಸ್ಕರಿಸಿದ್ದೇವೆ. ಈ ವಿಷಯದ ಬಗ್ಗೆ ಭಾರತದ ಸ್ಥಿರ ನಿಲುವಿನ ಬಗ್ಗೆ ಚೀನಾ ಚೆನ್ನಾಗಿ ತಿಳಿದಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರೆದಿದೆ. ಜಮ್ಮು‌ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಭಾರತದ ಆಂತರಿಕ ವಿಷಯವಾಗಿದೆ” ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಅಲ್ಲದೆ “ಚೀನಾವು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಜನರ ಜೀವನದ ಮೇಲೆ ಪರಿಣಾಮ ಬೀರುವ ಗಡಿಯಾಚೆಗಿನ ಭಯೋತ್ಪಾದನೆಯ ಉಪದ್ರವವನ್ನು ಗುರುತಿಸಿ ಖಂಡಿಸಬೇಕು” ಎಂದು ಭಾರತ ಒತ್ತಾಯಿಸಿದೆ.

ಈ ಹಿಂದೆ, ಚೀನಾ ತನ್ನ ಹೇಳಿಕೆಯಲ್ಲಿ ಮಾರ್ಚ್ 10ರಂದು ಕಾಶ್ಮೀರದ ಕುರಿತು ಪಾಕಿಸ್ತಾನ ಬರೆದ ಪತ್ರಕ್ಕೆ “ತಕ್ಷಣ” ಸ್ಪಂದಿಸಿದ್ದ ಸಂದರ್ಭದಲ್ಲಿ “ಪರಿಷತ್ತಿನ ಕಾರ್ಯಸೂಚಿಯಲ್ಲಿ ಉನ್ನತ ಸ್ಥಾನದಲ್ಲಿದೆ” ಎಂದು ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಈ ವಿಷಯ ಪ್ರಸ್ತಾಪಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಎಸ್‌ಎಂ ಖುರೇಷಿ ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಚೀನಾಕ್ಕೆ ಪತ್ರಬರೆದಿದ್ದರು. ಈ ನಡುವೆ ಕೋವಿಡ್ ಕುರಿತು ಸಭೆ ನಡೆಸಲು ವಿಫಲವಾದ ಕಾರಣ ಯುಎನ್‌ಎಸ್‌ಸಿಯಲ್ಲಿ ಬೀಜಿಂಗ್ ನಾಯಕತ್ವದ ವಿರುದ್ಧ ವ್ಯಾಪಕ‌ ಟೀಕೆ ವ್ಯಕ್ತವಾಗಿದೆ. ಯಾವುದೇ ಸಭೆ ನಡೆಯದಿದ್ದರೂ ಚೀನಾದ ರಾಯಭಾರಿ ಜಾಂಗ್ ಜುನ್ ಪಾಕಿಸ್ತಾನದ ಪತ್ರವನ್ನು ಪರಿಷತ್ತಿನ ಅಧಿಕೃತ ದಾಖಲೆಯಾಗಿ ಪ್ರಸಾರ ಮಾಡಿದ್ದರು.

ಕೊರೋನಾ ವೈರಸ್ ಹರಡುವಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡುವ ಭಯದಿಂದಾಗಿ ಚೀನಾ ಈ ಬಗ್ಗೆ ಚರ್ಚಿಸಲು ಆಸಕ್ತಿ ಹೊಂದಿಲ್ಲ ಎಂದು ಯುಎನ್‌ಎಸ್‌ಸಿ ಸದಸ್ಯ ರಾಷ್ಟ್ರಗಳ ಮೂಲಗಳು ಝೀ ವಾಹಿನಿಯ ಅಂತರಾಷ್ಟ್ರೀಯ ಸುದ್ದಿಸಂಸ್ಥೆ WIONಗೆ ತಿಳಿಸಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ