ಬೆಂಗಳೂರು, ಏ.8- ವಿಶ್ವವನ್ನೆ ಕಂಗೆಡಿಸಿರುವ ಕೊರೊನಾ ವೈರಸ್ ಭಾರತದಲ್ಲಿ ಮಾತ್ರ ನಿಧಾನ ಗತಿಯಲ್ಲಿ ಮಿಸುಕಾಡುತ್ತಿರುವುದು ಜಗತ್ತಿನ ಹಲವು ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ತಲೆ ಕೆಡಿಸಿದೆ. ಬಹುಶಃ ಇದಕ್ಕೆ ಭಾರತದಲ್ಲಿ ಚಾಲ್ತಿಯಲ್ಲಿರುವ ಬಿಸಿಜಿ ಚುಚ್ಚುಮದ್ದು ಕಾರಣ ಎಂಬ ಮಾಹಿತಿ ಹೊರ ಬಿದ್ದಿದೆ.
ಹೌದು ಬಿಸಿಜಿ ಚುಚ್ಚುಮದ್ದು ಹಾಕಿಸಿಕೊಂಡರನ್ನು ಕೊರೊನಾ ಏಕಾಏಕಿ ಬಾಧಿಸಲಾಗುತ್ತಿಲ್ಲ. ಹಾಗಾಗಿ ಭಾರತದಲ್ಲಿ ಕಳೆದ ಫೆಬ್ರವರಿಯಲ್ಲೇ ಸೋಂಕು ಪತ್ತೆಯಾದರೂ ಈವರೆಗೂ ಅಷ್ಟೇನು ಅನಾವುತಕಾರಿ ಪರಿಣಾಮಗಳನ್ನು ಉಂಟು ಮಾಡಿಲ್ಲ. ಇತರ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆ ಇದೆ. ಸಾವಿನ ಪ್ರಮಾಣವೂ ಸಮಾಧಾನ ಪಟ್ಟುಕೊಳ್ಳುವಂತಿದೆ.
130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸೋಂಕು ಕಾಣಿಸಿಕೊಂಡರೆ ನಿಯಂತ್ರಣ ಕಷ್ಟ ಸಾಧ್ಯ, ಅದರ ಪರಿಣಾಮವೂ ಊಹಿಸಲಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆತಂಕ ವ್ಯಕ್ತ ಪಡಿಸಿತ್ತು. ವಿಶ್ವಸಂಸ್ಥೆಯೂ ಭಾರತದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಾಲ ಕಾಲಕ್ಕೆ ಎಚ್ಚರಿಕೆ ನೀಡುತ್ತಲೆ ಬಂದಿತ್ತು. ಇದೇ ರೀತಿ ಇತರ ದೇಶಗಳಿಗೂ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು. ಆದರೆ ಭಾರತ, ಜಪಾನ್ ಹೊರತು ಪಡಿಸಿ ಉಳಿದೆಲ್ಲಾ ದೇಶಗಳಲ್ಲೂ ಸೋಂಕಿನ ಹಾವಳಿ ತೀವ್ರವಾಗಿದೆ.
ವಿಶ್ವದ ಬಹಳಷ್ಟು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ತಲೆ ಕೆಡಿಸಿಕೊಂದಿವೆ. ಅಮೆರಿಕಾದ ನ್ಯೂಯಾರ್ಕ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವರದಿಯೊಂದನ್ನು ಪ್ರಕಟಿಸಿದ್ದು, ಬಿಸಿಜಿ ಚುಚ್ಚುಮದ್ದು ಹಾಕುವ ಅಭಿಯಾನವನ್ನು ಸಾರ್ವತಿಕವಾಗಿ ಆಚರಣೆ ಮಾಡುತ್ತಿರುವ ದೇಶಗಳಲ್ಲಿ ಕೊರೊನಾದ ಪ್ರಮಾಣ ಕಡಿಮೆಯಿದೆ ಎಂದು ಹೇಳಿದೆ.
ಇಂಗ್ಲೆಂಡ್ ನಂತಹ ಮುಂದುವರೆದ ದೇಶದಲ್ಲಿ ಒಂದುವರೆ ತಿಂಗಳಿನಿಂದಲೂ ಲಾಕ್ ಡೌನ್ ಜಾರಿಯಲ್ಲಿದ್ದರು ಅಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ, ಸಾವಿನ ಸಂಖ್ಯೆಯೂ ವಿಪರೀತವಾಗಿದೆ. ಇಟಲಿಯಂತೂ ಸಾವಿನ ಮನೆಯಾಗಿದೆ. ಅಮೆರಿಕಾ, ಇಟಲಿ, ಇಂಗ್ಲೆಂಡ್, ಭಾರತ, ಜಪಾನ್ ಹಾಗೂ ಮತ್ತಿತರ ದೇಶಗಳ ಪರಿಸ್ಥಿತಿ ಅಧ್ಯಯನ ನಡೆಸಿದ ಸಂಸ್ಥೆ ಬಿಸಿಜಿ ಚುಚ್ಚುಮದ್ದು ಅಭಿಯಾನ ಚಾಲನೆಯಲ್ಲಿರುವ ದೇಶಗಳಲ್ಲಿ ಕೊರೊನಾದ ಅಬ್ಬರ ತೀವ್ರವಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಕ್ಷಯ ರೋಗ ನಿಯಂತ್ರಣಕ್ಕೆ ಬಿಸಿಜಿ ಚುಚ್ಚುಮದ್ದನ್ನು ಹಾಕಿಸಲಾಗುತ್ತಿದೆ. ಕೊರೊನಾ ಮತ್ತು ಕ್ಷಯ ರೋಗಗಳು ಕೆಲವು ಸಮಾನ ಲಕ್ಷಣಗಳನ್ನು ಹೊಂದಿವೆ. ಉಸಿರಾಟದ ಸಮಸ್ಯೆಯ ಮೂಲಕ ರೋಗಿಯನ್ನು ಬಲಿ ಪಡೆಯುತ್ತಿವೆ. ಬಿಸಿಜಿ ಚುಚ್ಚು ಮದ್ದನ್ನು ಭಾರತ 1948ರಲ್ಲಿ ಆರಂಭಿಸಿತ್ತು.
ಇರಾನ್ 1984ರಲ್ಲಿ ಬಿಸಿಜಿ ಆರಂಭಿಸಿತ್ತು, ಅಲ್ಲಿ ಸಾವಿನ ಪ್ರಮಾಣ ಶೇ.19.7 ಇದೆ, ಜಪಾನ್ 1947ರಲ್ಲಿ ಬಿಸಿಜಿ ಅಭಿಯಾನ ಆರಂಭಿಸಿತ್ತು, ಅಲ್ಲಿ ಸಾವಿನ ಪ್ರಮಾಣ 0.28ರಷ್ಟಿದೆ. ಒಂದು ಮಿಲಿಯನï ಜನರ ಪೈಕಿ 100 ಮಂದಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ.
ಬ್ರೆಜಿಲ್ ನಲ್ಲಿ 1920ರಲ್ಲಿ ಅಭಿಯಾನ ಆರಂಭವಾಯಿತು, ಅಲ್ಲಿ ಸಾವಿನ ಸಂಖ್ಯೆ 0.0573ರಷ್ಟಿದೆ. ಯೂರೋಪ್ ದೇಶಗಳಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ 1963 ಮತ್ತು 2010ರಲ್ಲಿ ಚುಚ್ಚುಮದ್ದು ನೀಡುವುದನ್ನು ನಿಲ್ಲಿಸಿದವು.
ಸದ್ಯದಲ್ಲಿ ವಿಶ್ವದ 180 ದೇಶಗಳು ಬಿಸಿಜಿ ಚುಚ್ಚುಮದ್ದು ಅಭಿಯಾನವನ್ನು ಚಾಲ್ತಿಯಲ್ಲಿಟ್ಟಿವೆ, 157 ದೇಶಗಳು ಅಭಿಯಾನವನ್ನು ನಿಲ್ಲಿಸಿವೆ. ಇತ್ತೀಚೆಗೆ 23 ದೇಶಗಳು ಕ್ಷಯ ಮುಕ್ತ ಎಂದು ಘೋಷಣೆಯಾದ ಬಳಿಕ ಅಭಿಯಾನವನ್ನು ನಿಲ್ಲಿಸಿವೆ. ಅದರಲ್ಲಿ ಇಟಲಿಯಲ್ಲಿ ಅಮೆರಿಕಾದಲ್ಲಿ 1.90 ಲಕ್ಷ ಮಂದಿಗೆ ಸೋಂಕು ತಗುಲಿದ್ದರೆ ನಾಲ್ಕು ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
ಇಟಲಿಯಲ್ಲಿ 1.05 ಮಂದಿಗೆ ಸೋಂಕು ತಗಲುವ ವೇಳೆಗೆ 12 ಸಾವಿರ ಮಂದಿ ಸಾವನ್ನಪ್ಪಿದ್ದರು. ನೆದರ್ ಲ್ಯಾಂಡ್ನಲ್ಲಿ 12 ಸಾವಿರ ಮಂದಿಗೆ ಸೋಂಕು ತಗಲುವ ವೇಳೆಗೆ ಒಂದು ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಈ ಲೆಕ್ಕಾಚಾರದಲ್ಲಿ ನೋಡಿದರೆ ಭಾರತದಲ್ಲಿನï ಅನಾವುತಗಳ ಪ್ರಮಾಣ ಕಡಿಮೆಯೆಂದೆ ಹೇಳಬೇಕಿದೆ. ಆದರೆ ಅಮೆರಿಕಾ ಸಂಸ್ಥೆಯ ಸಂಶೋಧನೆಯ ಬಗ್ಗೆ ನಿಖರವಾಗಿ ಯಾವ ನಿರ್ಣಯಕ್ಕೂ ಬರಲು ಇತರ ದೇಶಗಳು ಹಿಂದೇಟು ಹಾಕುತ್ತಿವೆ. ಈ ವರದಿಯ ನಿಖರತೆ ಬಗ್ಗೆ ಇನ್ನಷ್ಟು ವಿಜ್ಞಾನಿಕ ಅಂಶಗಳ ಅಗತ್ಯ ಇದೆ. ಮೇಲ್ನೋಟಕ್ಕೆ ವಾದವನ್ನು ಒಪ್ಪಬಹುದಾದರೂ ಮತ್ತಷ್ಟು ಸಂಶೋಧನೆ ಅಗತ್ಯ ಎಂದು ಭಾರತ ವಿಜ್ಞಾನಿಗಳು ಹೇಳಿದ್ದಾರೆ.
ಆಸ್ಟ್ರೇಲಿಯಾ ಅಮೆರಿಕಾದ ವರದಿಗೆ ಭಾಗಶಃ ಸಹಮತ ವ್ಯಕ್ತ ಪಡಿಸಿದ್ದು, ಬಿಸಿಜಿಯಲ್ಲಿನ ಔಷಧ ಮಿಶ್ರಣಗಳ ಮೂಲಕವೇ ಕೊರೊನಾಗೆ ಚುಚ್ಚು ಮದ್ದು ಕಂಡು ಹಿಡಿಯುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.