ಟಿ.ದಾಸರಹಳ್ಳಿ, ಏ.6- ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರ್ಗತಿಕರ ಹಸಿವು ನೀಗಿಸಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಲ್ಲಸಂದ್ರ ವಾರ್ಡ್ನ ಸೆಲೆಕ್ಷನ್ ಕಾರ್ನರ್ನಲ್ಲಿ ಯಡಿಯೂರಪ್ಪ ಕ್ಯಾಂಟೀನ್ಗೆ ಚಾಲನೆ ನೀಡಿ ಮಾತನಾಡಿದರು.
ಲಾಕ್ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡುವುದರ ಜತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದರು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ಹಣ ವ್ಯಯಿಸಲಾಗಿದೆ. 395 ಕೋಟಿ ಕೇಂದ್ರ ಸರ್ಕಾರದಿಂದ ಬಂದಿದ್ದು, ಕಡು ಬಡವರ ಊಟ-ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.
ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆಜಿ ಆಹಾರ ಪದಾರ್ಥಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ನೀಡಲಾಗಿದ್ದು, ಇನ್ನೂ 30 ಸಾವಿರ ಕಾರ್ಮಿಕರಿಗೆ ನೀಡಲಾಗುವುದು. ಜತೆಗೆ ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದರು.
ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ಎರಡು ತಿಂಗಳಿಗೆ ಮುಂಗಡವಾಗಿ ಬಿಡುಗಡೆಗೊಳಿಸಲಾಗಿದೆ ಎಂದರು.
ರೈತರ ತೋಟಗಾರಿಕಾ, ಕೃಷಿ ಉತ್ಪನ್ನಗಳ ಮಾರಾಟ ಸಾಗಾಟಕ್ಕೆ ಈಗಾಗಲೇ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಮಾರುಕಟ್ಟೆಗೆ ಬರಲು ತೊಂದರೆಯಾಗುವ ರೈತರ ಉತ್ಪನ್ನಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಾಜಿ ಶಾಸಕ ಮುನಿರಾಜು ಮಾತನಾಡಿ, ಬಡವರ ಹಸಿವು ನೀಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಕ್ಷೇತ್ರದ ಮಟ್ಟದಲ್ಲಿ ಪಡಿತರ ಚೀಟಿ ಇಲ್ಲದ ಕಡು ಬಡವರಿಗೆ ತಿಂಡಿ ಊಟ ಹಾಗೂ ಅಗತ್ಯ ದಿನಸಿಗಳನ್ನು ಯಡಿಯೂರಪ್ಪ ಕ್ಯಾಂಟೀನ್ ಮೂಲಕ ಪೂರೈಸಲಾಗುತ್ತಿದೆ ಎಂದರು.
ಎಷ್ಟೇ ಜನ ಬಂದರೂ ಶುಚಿ-ರುಚಿಯ ಆಹಾರ ಪಟ್ಟಣಗಳನ್ನು ವಿತರಿಸಲಾಗುವುದು. ಜತೆಗೆ ಸೋಂಕು ಹರಡದಂತೆ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.
ದಾಸರಹಳ್ಳಿ ಬಿಜೆಪಿ ಕ್ಷೇತ್ರಾಧ್ಯಕ್ಷ ಎನ್ ಲೋಕೇಶ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಕ್ಯಾಂಟೀನ್ ನಡೆಸಲಾಗುತ್ತಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ಮುಂದುವರಿಸಲಾಗುವುದು ಎಂದರು.
ಬೆಂಗಳೂರು ಜಿಪಂ ಅಧ್ಯಕ್ಷ ಮರಿಸ್ವಾಮಿ, ದಾಸರಹಳ್ಳಿ ಬಿಜೆಪಿ ಕ್ಷೇತ್ರಾಧ್ಯಕ್ಷ ಎನ್.ಲೋಕೇಶ್, ಮುಖಂಡರಾದ ಬಿ.ಎಂ.ನಾರಾಯಣ್, ಗಂಗರಾಜು, ರವಿಗೌಡ ಮತ್ತಿತರರಿದ್ದರು.