ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧ ವೈರಾಣು ಸೋಂಕಿತರಾಗದಂತೆ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಮನೆಯ ಹೊರಗಡೆ ಹೆಜ್ಜೆ ಹಾಕುವಾಗ ಮಾಸ್ಕ್ ಧರಿಸಲೇ ಬೇಕು. ಆದರೆ ಫಾರ್ಮೆಸಿಗೆ ತೆರಳ ಮಾಸ್ಕ್ ಖರೀದಿಸುವ ಬದಲು ಮನೆಯಲ್ಲೇ ಅದನ್ನು ತಯಾರಿಸಿಕೊಳ್ಳಿ. ಫಾರ್ಮೆಸಿಯಲ್ಲಿ ಖರೀದಿಸುವ ಮಾಸ್ಕ್ ಅದು ಆರೋಗ್ಯ ಕಾರ್ಯಕರ್ತರು ಧರಿಸಿ ಮಾಸ್ಕ್ ಆಗಿದ್ದು, ಈಗ ಇಂತಹ ಮಾಸ್ಕ್ಗಳ ಕೊರತೆ ಇದೆ. ಅಲ್ಲದೆ ಇಂತಹ ಸರ್ಜಿಕಲ್ ಮಾಸ್ಕ್ ನಿಮಗೆ ಬೇಕಾಗಿಲ್ಲ. ಸರಳ ಮಾಸ್ಕೇ ಸಾಕು.
ಹಳೆಯ ಟಿ.ಶರ್ಟ್, ಮಸುಕಾದ ದುಪ್ಪಟ್ಟ ಅಥವಾ ಮೂಲೆ ಸೇರಿದ ಕರವಸ್ತ್ರ ಅಥವಾ ಯಾವುದೇ ಬಣ್ಣಗುಂದಿದ ಬಟ್ಟೆಯಿಂದ ನಿಮ್ಮ ಮಾಸ್ಕ್ನ್ನು ನೀವೇ ತಯಾರಿಸಿ. ಪ್ರತಿಯೊಬ್ಬರಿಗೂ ಎರಡು ಮಾಸ್ಕ್ ಬೇಕಾಗುತ್ತದೆ. ಒಮ್ಮೆ ಬಳಸಿದನ್ನು ಒಗೆದು ಒಣ ಹಾಕಿದಾಗ ಧರಿಸಲು ಇನ್ನೊಂದರ ಅಗತ್ಯವಿದೆ. ಅಲ್ಲದೆ ಒಬ್ಬರು ಧರಿಸಿದ ಮಾಸ್ಕ್ನ್ನು ಒಗೆದ ಮೇಲೂ ಇನ್ನೊಬ್ಬರು ಧರಿಸುವುದು ಸರಿಯಲ್ಲ. ಏಕೆಂದರೆ ವೈರಾಣು ಅವರಿಗೆ ತಗಲುವ ಸಾಧ್ಯತೆ ಇದೆ. ಆದುದರಿಂದ ನಿಮ್ಮ ಕುಟುಂಬದ ನಾಲ್ವರು ಸದಸ್ಯರಿಗೆ 8 ಮಾಸ್ಕ್ಗಳು ಬೇಕಾಗುತ್ತವೆ. ಹಾಗಾಗಿ ನಿಮ್ಮ ಮಾಸ್ಕ್ನ್ನು ಮನೆಯಲ್ಲೇ ಹೊಲಿದುಕೊಳ್ಳಬಹುದು. ಆದರೆ ಬಟ್ಟೆ ಸ್ವಚ್ಛವಾಗಿರಬೇಕೆಂಬುದನ್ನು ಮರೆಯದಿರಿ.
ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯ ಪ್ರತ್ಯೇಕ ಮಾಸ್ಕ್ ಇರಲಿ. ಪ್ರತಿದಿನ ನಿಮ್ಮ ಮಾಸ್ಕ್ನ್ನು ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಿರಿ. ತೊಳೆದ ಮಾಸ್ಕ್ನ್ನು ಬಿಸಿಲಲ್ಲಿ 5 ತಾಸು ಕಾಲ ಒಣ ಹಾಕಬೇಕು ಎಂದು ತಜ್ಞರು ಹೇಳುತ್ತಾರೆ.