ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಇಳಿದಿದೆಯಾ ಎಂಬ ಸಂಶಯ

Coronavirus collage Karnataka State map and red grunge stamp watermarks with biohazard symbol. Karnataka State map collage composed with random viral symbols. Red round outbreak danger watermark,

ಬೆಂಗಳೂರು, ಏ.6- ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿಯಂತೆ ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಇಳಿದಿದೆಯಾ ಎಂಬ ಸಂಶಯ ಬರುತ್ತಿದೆ.

ಕೊರೊನಾ ದಿನೇ ದಿನೇ ಬಾಧಿಸುತ್ತಿದ್ದು, ಪಾಸಿಟೀವ್ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದ್ದು, ಅದರಲ್ಲಿ ಮೂವರು ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದವರ ಸಂಖ್ಯೆ ಹೆಚ್ಚಿದ್ದು, ದಿನಕಳೆದಂತೆ ಪಾಸಿಟಿವ್ ಕೇಸ್ ದಾಖಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ.

ಕೊರೊನಾ ವೈರಸ್ ಪೀಡಿತರಿಗೆ ಅಂತಿಮ ಹಂತದಲ್ಲಿ ಚಿಕಿತ್ಸೆ ಕೊಡಲು ಲಭ್ಯವಿರುವ ವೆಂಟಿಲೇಟರ್‍ಗಳ ಸಂಖ್ಯೆ ಕೇವಲ 178 ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ಕೊಟ್ಟಿದೆ.

ಮಾಹಿತಿ ಕೇಳಿದ್ದ ಕೇಂದ್ರ ಆರೋಗ್ಯ ಇಲಾಖೆ: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವರದಿ ಕೊಡುವಂತೆ ಮಾ.31ರಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಕೇಳಿತ್ತು. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆ ಕೊಟ್ಟಿರುವ ಮಾಹಿತಿ ದಿಗ್ಭ್ರಮೆಗೊಳಿಸುವಂತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆಂದು ನಿಗದಿ ಮಾಡಿರುವ ಆಸ್ಪತ್ರೆಗಳ ಸಂಖ್ಯೆ ಕೇವಲ 8 ಮಾತ್ರ ಎಂದು ಮಾಹಿತಿ ಕೊಡಲಾಗಿದೆ.

8 ಜಿಲ್ಲೆಗಳ 9 ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಅವಕಾಶವಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಕಲಬುರಗಿ, ಗದಗ, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ಕೊಡಲು ಆಸ್ಪತ್ರೆಗಳನ್ನು ನಿಗದಿ ಮಾಡಿಕೊಂಡಿದೆ.

ಉಳಿದಂತೆ ಇನ್ನುಳಿದ 22 ಜಿಲ್ಲೆಗಳಲ್ಲಿ ವಿಶೇಷ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ತುತ್ತಾಗುವವರಿಗೆ ಚಿಕಿತ್ಸೆ ಕೊಡಲು ಅನುಕೂಲವಾಗುವಂತೆ ಪ್ರತ್ಯೇಕ ಆಸ್ಪತ್ರೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ಕೊಟ್ಟಿತ್ತು.

ಇನ್ನು ಇದೇ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಐಸಿಯು ಹಾಗೂ ಐಸೋಲೆಟೆಡ್ ಬೆಡ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಐಸಿಯು ಹಾಗೂ 500 ಐಸೋಲೆಟೆಡ್ ಬೆಡ್‍ಗಳು, ಬೌರಿಂಗ್ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 240 ಐಸೋಲೆಟೆಡ್ ಬೆಡ್‍ಗಳು, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ 20 ಐಸಿಯು ಹಾಗೂ 300 ಐಸೋಲೆಟೆಡ್ ಬೆಡ್‍ಗಳು, ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 150 ಐಸೋಲೆಟೆಡ್ ಬೆಡ್‍ಗಳು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 23 ಐಸಿಯು ಹಾಗೂ 400 ಐಸೋಲೆಟೆಡ್ ಬೆಡ್‍ಗಳು, ಕಲಬುರಗಿಯ ಇಎಸ್‍ಐ ಆಸ್ಪತ್ರೆಯಲ್ಲಿ 36 ಐಸಿಯು ಹಾಗೂ 250 ಐಸೋಲೆಟೆಡ್ ಬೆಡ್‍ಗಳು, ಗದಗ್ ಜಿಲ್ಲಾ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 100 ಐಸೋಲೆಟೆಡ್ ಬೆಡ್‍ಗಳು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 25 ಐಸಿಯು ಹಾಗೂ 200 ಐಸೋಲೆಟೆಡ್ ಬೆಡ್‍ಗಳು ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 30 ಐಸಿಯು ಹಾಗೂ 350 ಐಸೋಲೆಟೆಡ್ ಬೆಡ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಯಾವ್ಯಾವ ಆಸ್ಪತ್ರೆಯಲ್ಲಿ ಎಷ್ಟಿವೆ ವೆಂಟಿಲೇಟರ್?
ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್‍ಗಳು, ಬೌರಿಂಗ್ ಲೇಡಿ ಕರ್ಜನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೇವಲ 4 ವೆಂಟಿಲೇಟರ್ಸ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 5 ವೆಂಟಿಲೇಟರ್ಸ್, ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 18, ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ 28, ಕಲಬುರಗಿ ಇಎಸ್‍ಐ ಆಸ್ಪತ್ರೆಯಲ್ಲಿ 16, ಗದಗ ಜಿಲ್ಲಾಸ್ಪತ್ರೆಯಲ್ಲಿ 12, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 15, ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್‍ಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ