ಬೆಂಗಳೂರು,ಏ.6- ಹತ್ತಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕನಕಾಂಬರ ಹೂವು ಬಾಡಿ ಹೋಗುತ್ತಿವೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೂ ಕೀಳಲಾಗದೆ, ಮಾರುಕಟ್ಟೆಗೂ ಸಾಗಿಸಲಾಗದೆ ಕನಕಾಂಬರ ಬೆಳೆಗಾರರ ಬದುಕು ಕಮರಿಹೋಗಿದೆ.
ಮಹಾಮಾರಿ ಕೊರೊನಾ ಸೋಂಕು ತಡೆಯುವ ಸಲುವಾಗಿ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ರೈತರು ಇಂದೇನಾಗುತ್ತೋ, ನಾಳೆ ಏನಾಗುತ್ತೋ ಎಂಬ ಆತಂಕದಲ್ಲಿದ್ದಾರೆ.
ತಾವು ಬೆಳೆದ ಅಲ್ಪಸ್ವಲ್ಪ ಹಣ್ಣು, ತರಕಾರಿಯನ್ನೂ ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಣಕಾಲ್ಮೂರು ತಾಲ್ಲೂಕು ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಎಂಬುವರು 4 ಎಕರೆಯಲ್ಲಿ ಕನಕಾಂಬರ ಹೂ ಬೆಳೆದಿದ್ದು, ಹೂ ಕೀಳಲಾಗದೆ ಉದುರುತ್ತಿದೆ.
ಹೂ ಕಿತ್ತು ಸಾಗಿಸಲು ವಾಹನಗಳು ಸಿಗುತ್ತಿಲ್ಲ. ಮತ್ತೊಂದೆಡೆ ಹೂ ಮಾರುಕಟ್ಟೆಗಳೆಲ್ಲ ಬಂದ್ ಆಗಿರುವುದರಿಂದ ಸಾಗಿಸುವುದಾದರೂ ಎಲ್ಲಿಗೆ ಎಂಬ ಚಿಂತೆಯಲ್ಲಿ ಧರ್ಮಣ್ಣ ದಿನದೂಡುತ್ತಿದ್ದಾರೆ.
ಲಭ್ಯವಿದ್ದ ನೀರನ್ನೇ ಬಳಸಿಕೊಂಡು ಕನಕಾಂಬರ ಹೂ ಬೆಳೆದಿದ್ದರು. ಬಿಸಲಿಗೆ ಹೂಗಳು ಒಣಗುತ್ತಿವೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇದು ಒಂದೆರಡು ಬೆಳೆಗಾರರ ಪರಿಸ್ಥಿತಿಯಲ್ಲ. ರಾಜ್ಯದೆಲ್ಲೆಡೆ ಇದೇ ಪರಿಸ್ಥಿತಿಯಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ರಫ್ತು ಸ್ಥಗಿತಗೊಂಡ ಕಾರಣ ಸಾವಿರಾರು ರೈತ ಕುಟುಂಬಗಳು ಕಂಗಾಲಾಗಿವೆ.
ಗುಲಾಬಿ, ಸೇವಂತಿ, ಸುಗಂಧರಾಜ, ಮಲ್ಲಿಗೆ ಹೂಗಳನ್ನು ಕೇಳುವವರು ಇಲ್ಲದಂತಾಗಿದೆ. ಎಲ್ಲ ತೋಟಗಳಲ್ಲಿ ಬಿಟ್ಟ ಹೂ ಒಣಗಿ ಬಾಡುತ್ತಿವೆ. ಹೂ ಬೆಳೆದು ಬದುಕನ್ನು ಹೂವಾಗಿಸಿಕೊಂಡಿದ್ದ ರೈತರ ಬದುಕು ಸದ್ಯ ಮುಳ್ಳಿನ ಹಾಸಿಗೆಯಂತಾಗಿದೆ.
ಸರ್ಕಾರ ನೆರವಿಗೆ ಧಾವಿಸುತ್ತದೆಯೇ ಎಂಬುದನ್ನು ರೈತರ ಆಗ್ರಹವಾಗಿದೆ.