ನವದೆಹಲಿ, ಏ.6-ಕಿಲ್ಲರ್ ಕೊರೊನಾ ಕಾಟದಿಂದ ಇಡೀ ದೇಶದ ಲಾಕ್ಡೌನ್ 12ನೆ ದಿನಕ್ಕೆ ಕಾಲಿಟ್ಟಿದೆ. ಈ ಮಹಾಮಾರಿಯ ನಿಗ್ರಹಕ್ಕೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಸಾಂಕ್ರಾಮಿಕ ರೋಗವು ಮತ್ತಷ್ಟು ಸ್ಫೋಟಗೊಂಡಿದೆ.
ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಗ್ ಧಾರ್ಮಿಕ ಸಭೆಗೂ ಮತ್ತು ಹೊಸದಾಗಿ ಪತ್ತೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಿಗೂ ಸಂಬಂಧವಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.
ಮಾರ್ಚ್ 24ರಿಂದ ಜಾರಿಗೆ ಬಂದ ಲಾಕ್ಡೌನ್ ಏಪ್ರಿಲ್ 14ರವರೆಗೂ ಮುಂದುವರಿಯಲಿದ್ದು, ಜನಜೀವನ ಅಯೋಮಯವಾಗಿದೆ. ಒಂದೆಡೆ ವಿವಿಧ ರಾಜ್ಯಗಳಲ್ಲಿ ಸಾವು ಮತ್ತು ಸೋಂಕಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಆರ್ಥಿಕ ಹೊಡೆತದಿಂದ ಜನ ಹೈರಾಣಾಗಿದ್ದಾರೆ.
ಇಷ್ಟು ದಿನ ಇಡೀ ದೇಶವೇ ಲಾಕ್ಡೌನ್ ಅಗಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ದಿನನಿತ್ಯ ಕೋಟ್ಯಂತರ ರೂ.ಗಳಷ್ಟು ನಷ್ಟವಾಗುತ್ತಿದ್ದು, ಒಟ್ಟಾರೆ ಆರ್ಥಿಕ ನಷ್ಟ ಊಹೆಗೆ ನಿಲುಕದ್ದಾಗಿದೆ. ಇದು 2008ರ ಭಾರೀ ಆರ್ಥಿಕ ಸಂಕಷ್ಟಕ್ಕಿಂತಲೂ ಕಳವಳಕಾರಿಯಾಗಿದೆ.
ಎಲ್ಲ ವಲಯಗಳ ಕಾರ್ಯ ಮತ್ತು ಸೇವೆಗಳು ಬಂದ್ ಆಗಿರುವುದರಿಂದ ಅದು ಜನಜೀವನದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಒಂದೆಡೆ ಉದ್ಯೋಗ ನಷ್ಟ. ಮತ್ತೊಂದೆಡೆ ವೇತನ ಖೋತಾ, ವ್ಯಾಪಾರ-ವಹಿವಾಟು ಹಾನಿಯಿಂದ ಜನರು ಕಂಗೆಟ್ಟಿದ್ದಾರೆ. ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬೀದಿ ಬದಿ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಒಂದೊಂತ್ತಿನ ಊಟಕ್ಕೂ ತತ್ವಾರವಾಗಿದೆ.
ಇಡೀ ದೇಶದಲ್ಲೇ ಜಾರಿಯಲ್ಲಿರುವ ಲಾಕ್ಔಟ್ 12ನೆ ದಿನಕ್ಕೆ ಕಾಲಿಟ್ಟಿದ್ದು, ಕೋವಿಡ್-19 ವೈರಸ್ನ ಕ್ರೌರ್ಯ ಅಟ್ಟಹಾಸ ಅವ್ಯಾಹತವಾಗಿ ಮುಂದುವರಿದಿದೆ. ಮುಂದೇನು ಎಂಬ ಚಿಂತೆ 130 ಕೋಟಿ ಭಾರತೀಯರನ್ನೂ ಕಾಡುತ್ತಿದೆ.