ಹೊಸದಿಲ್ಲಿ : ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟಲು ಜಗತ್ತಿನ ವಿವಿಧ ದೇಶಗಳು ಲಾಕ್ಡೌನ್ ಹೇರಿ ಸಾಕಷ್ಟು ನಿಯಂತ್ರಣಾ ಕ್ರಮಗಳನ್ನು ಹೇರಿ ಹೆಣಗಾಟ ನಡೆಸುತ್ತಿವೆ. ಇಂತಹ ಮುನ್ನೆಚ್ಚರಿಕೆ ಕ್ರಮಗಳಲ್ಲಿ, ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಒಟ್ಟಾರೆಯಾಗಿ ಸಾಮಾಜಿಕ ಅಂತರವನ್ನು ಕನಿಷ್ಠ 1 ಮೀಟರ್ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಆದರೆ ಇದೀಗ ಎಂಐಟಿ ವಿಜ್ಞಾನಿಯ ಹೊಸ ಸಂಶೋಧನೆಯೊಂದರಂತೆ, ಈ ಅಂತರವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಯಾಕೆಂದರೆ ಕೊರೋನಾ ವೈರಸ್ 27 ಅಡಿಗಳವರೆಗೂ ಚಲಿಸಬಲ್ಲದು, ಗಾಳಿಯಲ್ಲೂ ಕೆಲವು ಸಮಯ ಉಳಿಯಬಲ್ಲದು ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ.
ಕೊರೋನಾ ವೈರಾಣು ಕುರಿತಂತೆ ವಿಶ್ವದ ವಿವಿಧ ಸಂಶೋಧನಾ ಕೇಂದ್ರಗಳು ಅಧ್ಯಯನ ನಡೆಸುತ್ತಿವೆ. ಈ ಪೈಕಿ ಅಮೆರಿಕ ಮೂಲದ ಎಂಐಟಿ ವಿಜ್ಞಾನಿ ಮತ್ತು ಪ್ರಾಧ್ಯಾಪಕಿ ಲಿಡಿಯಾ ಬೌರೌಬಾ ಅವರೂ ಕೂಡ ಈ ವೈರಾಣುವಿನ ಮೇಲೆ ತಮ್ಮ ಸಂಶೋಧನೆ ನಡೆಸಿದ್ದು, ಈ ವೇಳೆ ವೈರಸ್ ಕುರಿತ ಹಲವು ಆತಂಕಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ವಿಶ್ವಾದ್ಯಂತ ವೈರಸ್ ಸೋಂಕು ತಡೆಗೆ ಕನಿಷ್ಠ 6 ಅಡಿ ಅಥವಾ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರಗಳು ಸೂಚನೆ ನೀಡಿವೆ. ಆದರೆ ಈ ಕೊರೋನಾ ವೈರಸ್ 23ರಿಂದ 27 ಅಡಿ ದೂರದವರೆಗೂ ಚಲಿಸಬಲ್ಲದು ಎಂದು ಅವರೀಗ ಹೇಳಿದ್ದಾರೆ. 1930ರಲ್ಲಿನ ಸೋಂಕು ಪ್ರಕರಣದ ನಿಯಮದಂತೆ 1 ಮೀಟರ್ ಅಥವಾ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರಗಳು ಸೂಚಿಸುತ್ತಿವೆ. ಆದರೆ ಈ ನಿಯಮ ಈಗ ಹಳೆಯದ್ದಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಈ ಕೊರೋನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ ಎಂಬ ಅಂಶವನ್ನು ನಿರಾಕರಿಸುವ ಅವರು ಕೊರೋನಾ ವೈರಸ್ ಗಾಳಿಯಲ್ಲಿ ಗಂಟೆಗಳ ಕಾಲ ಜೀವಿಸಬಲ್ಲದು. ವೈರಾಣುವಿನ ಕೆಲ ಅಂಶಗಳು ರೋಗಿಗೆ ಅಳವಡಿಸಲಾಗುವ ವೆಂಟಿಲೇಟರ್ನಲ್ಲೂ ಉಳಿಯಬಲ್ಲದು. ಇಂತಹ ಸಾಕಷ್ಟು ಉದಾಹರಣೆಗಳು ಚೀನಾದ ವುಹಾನ್ ನಲ್ಲಿ ನಮಗೆ ಸಿಗುತ್ತವೆ ಎಂದು ಗಮನ ಸೆಳೆದಿದ್ದಾರೆ. ಈಗ ಇರುವ ಸಾಮಾಜಿಕ ಅಂತರದಂತಹ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಅಂತರದ ಪ್ರಮಾಣವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ವೈರಸ್ ನಿಯಂತ್ರಣ ಅಸಾಧ್ಯ ಎಂದು ಎಚ್ಚರಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣ ಅಜಾಗರೂಕತೆ ಕಡ ಅವರಿಗೂ ಸೋಂಕು ತಗುಲುವಂತೆ ಮಾಡುತ್ತದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗೆ ಅತ್ಯಾಧುನಿಕ ಮತ್ತು ದೇಹದ ಎಲ್ಲ ಅಂಗಗಳನ್ನೂ ಮುಚ್ಚುವ ರಕ್ಷಣಾ ಕವಚ ನೀಡಬೇಕು ಎಂದು ಹೇಳಿದ್ದಾರೆ. ಲಿಡಿಯಾ ಅವರು ಕೆಮ್ಮುವಿಕೆ ಮತ್ತು ಸೀನುವಿಕೆಯ ಮೇಲೆ ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ.